ಹಾವು, ಚೇಳು ಈತನ ನಿತ್ಯ ಆಹಾರ...
ಬಂಗಾರಪೇಟೆ: ಎಲ್ಲರಿಗೂ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಎಂದರೆ ಇಷ್ಟ. ಆದರೆ, ಇಲ್ಲೊಬ್ಬ ಭೂಪನಿಗೆ ಮಟನ್ ಚಿಕನ್‌ಗಿಂತಲೂ ಹಾವು, ಚೇಳುಗಳೆಂದರೆ ಬಲು ಇಷ್ಟ. ಕಣ್ಣಿಗೆ ವಿಷ ಜಂತುಗಳು ಕಂಡರೆ ಈತನಿಗೆ ಆದಿನ ಹಬ್ಬವೋ ಹಬ್ಬ. ನಂಬಲು ಸ್ವಲ್ಪ ಕಷ್ಟವಾದರೂ ಇದು ನಿಜ... ತಾಲೂಕಿನ ಕೇತಗಾನಹಳ್ಳಿ ಪಂಚಾಯ್ತಿ ಬೋಯಿನಹಳ್ಳಿ ಗ್ರಾಮದವನಾದ ರೆಡ್ಡಪ್ಪ ಎಂಬಾತನಿಗೆ ವಿಷ ಜಂತುಗಳನ್ನು ಕಂಡರೆ ತುಂಬಾ ಪ್ರೀತಿ ಯಾವುದೇ ತರಹವಾದ ಹಾವು ಕಂಡರೆ ಸಾಕು ಅದನ್ನು ಹಿಡಿದು ಅದಕ್ಕೆ ಮಸಾಲೆ ಹಾಕಿ ಹೊಟ್ಟೆ ತುಂಬಾ ಸವಿಯುವನು. ಚಿಕ್ಕವನಿಂದಲೂ ರೆಡ್ಡಪ್ಪನಿಗೆ ಹಾವುಗಳನ್ನು ಹಿಡಿಯುವ ಅವ್ಯಾಸವಿದೆ, ಎಂತಹ ದೊಡ್ಡ ಗಾತ್ರದ ಹಾವಿರಲಿ ಅಥವಾ ಬೇರೆ ಯಾವುದೇ ವಿಷ ಜಂತುಗಳಿರಲಿ ಅದನ್ನು ನೀರು ಕುಡಿಯುವಷ್ಟು ಸಲೀಸಾಗಿ ಹಿಡಿಯುವನು.ಗ್ರಾಮದ ಸುತ್ತ ಮುತ್ತಲಿನಲ್ಲಿ ಹಾವುಗಳನ್ನು ಗ್ರಾಮಸ್ಥರು ಕಂಡರೆ ಮೊದಲು ರೆಡ್ಡಪ್ಪನನ್ನು ಕರೆಸಿಕೊಳ್ಳುವರು. ರೆಡ್ಡಪ್ಪ ಅವಿವಾಹಿತನಾಗಿದ್ದು, ಇವರಿಗೆ ಹಿಂದೆ ಮುಂದೆ ಯಾರೂ ಇಲ್ಲ. ಬೋಯಿನಹಳ್ಳಿ ಗ್ರಾಮದಲ್ಲಿ ಪುಟ್ಟದೊಂದು ಗುಡಿಸಲಲ್ಲಿ ವಾಸ ಮಾಡುತ್ತಾ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾನೆ. ಇದುವರೆಗೂ ಸುಮಾರು ಹತ್ತಕ್ಕೂ ಹೆಚ್ಚು ಹಾವುಗಳನ್ನು ತಿಂದಿದ್ದಾನೆ. ಆದರೆ, ಇದುವರೆಗೂ ದೇಹದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ ಆರೋಗ್ಯವಾಗಿಯೇ ಇದ್ದಾನೆ. ಹಾವು ಕಚ್ಚಿದರೆ ಅಥವಾ ವಿಷ ಜಂತುಗಳು ಕಚ್ಚಿದರೆ ಮನುಷ್ಯನಲ್ಲದೆ ಪ್ರಾಣಿಗಳು ಬದುಕುಳಿಯಲು ಅಸಾಧ್ಯವಾಗಿದೆ ಅಂತದ್ದರಲ್ಲಿ ರೆಡ್ಡಪ್ಪ ಹಾವುಗಳನ್ನು ತಿಂದು ಜೀವಿಸುತ್ತಿದ್ದಾನೆ.
ವಾಸಕ್ಕೆ ಮನೆ ಬೇಕಂತೆ: ಎಲ್ಲರಿಗೂ ಕೈ ತುಂಬಾ ಹಣಗಳಿಸುವ ಆಸೆ ಹೊಂದಿರುತ್ತಾರೆ. ಆದರೆ, ಈ ವಿಷದ ಮನುಷ್ಯನಿಗೆ ಆ ಹೊತ್ತಿನ ಹೊಟ್ಟೆ ತುಂಬಿದರೆ ಸಾಕು ನಾಳಿನ ಚಿಂಚೆ ಇಲ್ಲ ಮೂರು ಹೊತ್ತು ತುತ್ತಿನ ಚೀಲದ ಜತೆ ಗುಂಡು ಇರಲೇ ಬೇಕು. ರೆಡ್ಡಪ್ಪನಿಗೆ ವಾಸವಿರಲು ಮನೆ ಬೇಕಂತೆ, ಆದರೆ ಇವರ ಮನವಿಗೆ ಪಂಚಾಯ್ತಿಯವರು ಸ್ಪಂದಿಸುತ್ತಿಲ್ಲವಂತೆ. ಹಿಂದಿನ ಬಿಜೆಪಿ ಆಡಳಿತ ಸರ್ಕಾರದಲ್ಲಿ ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮನೆಗಳ ಹಂಚಿಕೆಯಲ್ಲಿ ಉಂಟಾದ ಲೋಪಗಳ ಬಗ್ಗೆ ಅಂದಿನ ಮುಖ್ಯಮಂತ್ರಿ ಸದಾನಂದಗೌಡರ ಗಮನ ಸೆಳೆದಿದ್ದರು. ಇಂದು ಅವರೇ ಶಾಸಕರಾಗಿದ್ದಾರೆ ಇವರಾದರು ಅರ್ಹರಿಗೆ ಆಶ್ರಯ ಮನೆಗಳು ದೊರೆಯುವಂತೆ ಶ್ರಮಿಸುವರೆ ಕಾದು ನೋಡಬೇಕು.
ತಿಪ್ಪೇನಹಳ್ಳಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ
ಚಿಕ್ಕಬಳ್ಳಾಪುರ: ಶ್ರೀ ಕೆ.ವಿ. ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳಿಂದ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ಏಳು ದಿನಗಳ ಕಾಲ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ನಡೆಯಿತು. ಶಿಬಿರಾಧಿಕಾರಿ ಕೆ.ವಿ. ಶ್ರೀನಿವಾಸಲು ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಬಿರದಲ್ಲಿ ಪ್ರಶಿಕ್ಷಣಾರ್ಥಿಗಳು ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಪ್ರದೇಶಗಳನ್ನೊಳಗೊಂಡಂತೆ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯ, ಗಣೇಶ ದೇವಾಲಯ ಹಾಗೂ ರಂಗಸ್ಥಳದ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಸುತ್ತಮುತ್ತಲ ಆವರಣಗಳನ್ನು ಸ್ವಚ್ಛಗೊಳಿಸಿದರು. ಸ್ವಚ್ಛತಾ ಕಾರ್ಯಕ್ರಮಗಳಲ್ಲದೇ ವೃದ್ಧಾಪ್ಯ ವೇತನ, ಸಣ್ಣ ಉಳಿತಾಯ, ಪ್ರಥಮ ಚಿಕಿತ್ಸೆ, ಅಕ್ಷರ ಕ್ರಾಂತಿ ವಿಚಾರ ಬಗ್ಗೆ ಜಾಥಾ ಕಾರ್ಯಕ್ರಮಗಳನ್ನು ಕೈಗೊಂಡು ಹಾಗೂ ಏಡ್ಸ್ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಬೀದಿ ನಾಟಕಗಳೊಂದಿಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
ದಲಿತರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿ: ಗಂಗಾಧರ್
ಗೌರಿಬಿದನೂರು: ದಲಿತ ಸಂಘಟನೆಗಳು ದಲಿತರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ರಾಜಕೀಯ ಪ್ರಜ್ಞೆಯನ್ನು ಮೂಡಿಸಬೇಕು, ರಾಜಕೀಯವಾಗಿ ದಲಿತರು ಮೇಲೆ ಬಾರದ ಹೊರತು ಶೋಷಣೆಯಿಂದ ಮುಕ್ತಿ ಸಿಗಲಾರದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಬಿ.ಎನ್. ಗಂಗಾಧರ್ ಅಭಿಪ್ರಾಯಪಟ್ಟರು. ತಾಲೂಕಿನ ಬೊಮ್ಮಶೆಟ್ಟಿಹಳ್ಳಿಯಲ್ಲಿ ಸಮಿತಿಯ ನೂತನ ಶಾಖೆಯ ನಾಮಫಲಕವನ್ನು ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ಇನ್ನೂ ಮೌಢ್ಯತೆ ಉಳಿದುಕೊಂಡಿದೆ, ಇದನ್ನು ತೊಡೆದು ಹಾಕಲು ಗ್ರಾಮೀಣ ಪ್ರದೇಶದಲ್ಲಿ ಅಂಬೇಡ್ಕರ್ ಚಿಂತನೆಗಳನ್ನು ಜನರಿಗೆ ತಿಳಿಸಬೇಕು ಎಂದರು. ವಕೀಲ ಲಕ್ಷ್ಮೀನಾರಾಯಣ, ಟಿಪಿಎಸ್ ಮಾಜಿ ಅಧ್ಯಕ್ಷ ಗಂಗಾಧರಪ್ಪ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಟಪ್ಪ, ರಾಮಾಂಜಿನಪ್ಪ, ಕೆ.ವಿ. ವೆಂಕಟೇಶ್,ನರಸಿಂಹಯ್ಯ, ಬಾಲಕೃಷ್ಣ, ವಕೀಲ ನಾಗರಾಜು, ಜಗದೀಶ್ ಪಾಲ್ಗೊಂಡಿದ್ದರು.