ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಪಘಾತದಲ್ಲಿ ಐವರಿಗೆ ತೀವ್ರ ಗಾಯ

Vishwanath S
Updated On : 6 Jun 2013, 12:41 pm

ದೊಡ್ಡಬಳ್ಳಾಪುರ: ತಾಲೂಕಿನ ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿಯ ಗೌರಿಬಿದನೂರು ರಸ್ತೆ ಗೊಲ್ಲಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ಮಾರುತಿ ಓಮ್ನಿ ಕಾರು ಮತ್ತು ಮಿನಿ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಗಾಯಗೊಂಡವರನ್ನು ಗೌರಿಬಿದನೂರು ತಾಲೂಕು ಹೊಸೂರು ಗ್ರಾಮದ ಮುರಳಿಕೃಷ್ಣ, ವೆಂಕಟ್,  ಅನಂತಲಕ್ಷ್ಮಿ, ಮಕ್ಕಳಾದ ದಿವ್ಯಶ್ರೀ ಮತ್ತು ವಿಶ್ವಾಸ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಗೌರಿಬಿದನೂರಿನ ಹೊಸೂರಿಗೆ ಈ ಎಲ್ಲರೂ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಮಿನಿಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಗಾಯಾಳುಗಳನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಿಳೆ ನಾಪತ್ತೆ: ದೂರು
ಹೊಸಕೋಟೆ : ತಾಲೂಕಿನ ಜಡಿಗೇನಹಳ್ಳಿ ಹೋಬಳಿ ದೊಡ್ಡನಲ್ಲೂರಹಳ್ಳಿಯಿಂದ ಮಹಿಳೆ ಕಾಣೆಯಾಗಿದ್ದಾಳೆ. ನಾರಾಯಣಸ್ವಾಮಿ ಎಂಬುವರ ಪತ್ನಿ ಭಾಗ್ಯಮ್ಮ (28) ಕಾಣೆಯಾದ ಮಹಿಳೆ. ಮೇ 30ರಂದು ಕೆಲಸಕ್ಕೆ ಹೋದ ನಂತರ ಮನೆಗೆ ಹಿಂದಿರುಗಿಲ್ಲ, ಸಂಬಂಧಿಗಳ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಮಹಿಳೆಯು ಸುಮಾರು 5.2 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟು, ಕೆಂಪು ಮೈಬಣ್ಣ ಹೊಂದಿದ್ದು ಕನ್ನಡ, ತೆಲಗು ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೊರಟ ಸಂದರ್ಭದಲ್ಲಿ ಕೆಂಪು ಬಣ್ಣದ ಸೀರೆ ಮತ್ತು ಅದೇ ಬಣ್ಣದ ರವಿಕ ತೊಟ್ಟಿದ್ದಳು. ನಂದಗೂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಯಾರಿಗಾದರೂ ಕಂಡುಬಂದಲ್ಲಿ ದೂ.(080)27961250 ಸಂಪರ್ಕಿಸಬಹುದಾಗಿದೆ.

ಆಕಸ್ಮಿಕ ಅಗ್ನಿ ಅವಘಡ: ಲಕ್ಷಾಂತರ ರು. ನಷ್ಟ
ಕನಕಪುರ: ಕನಕಪುರ ಪಟ್ಟಣದ ಹೊಸಬೀದಿಯಲ್ಲಿನ ಮನೆಯೊಂದರಲ್ಲಿ ಆಕಸ್ಮಿಕವಾಗಿ ಅಗ್ನಿಪ್ರಮಾದ ಸಂಭವಿಸಿ ಲಕ್ಷಾಂತರ ರು.ಗಳ ನಷ್ಟ ಉಂಟಾಗಿದೆ. ಇಲ್ಲಿನ 25ನೇ ವಾರ್ಡ್‌ನ ನಿವಾಸಿ ನಾರಾಯಣ್ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಪ್ರಮಾದಕ್ಕೆ ಕಾರಣಗಳೇನೆಂದು ತಿಳಿದು ಬಂದಿಲ್ಲ.
ಬಾಳೇಹಣ್ಣಿನ ವ್ಯಾಪಾರಿಯಾಗಿರುವ ನಾರಾಯಣ್ ಬುಧವಾರ ವ್ಯವಹಾರ ನಿಮಿತ್ತ ಬೆಳಗ್ಗೆಯೇ ಬೆಂಗಳೂರಿಗೆ ತೆರಳಿದ್ದು, ಅವರ ಪತ್ನಿ ತವರುಮನೆಗೆ ಹೋಗಿದ್ದಾಗ ಅಗ್ನಿ ಪ್ರಮಾದ ಸಂಭವಿಸಿದೆ. ಈ ಅವಘಡದಲ್ಲಿ ಮನೆಯ ಕಪಾಟಿನಲ್ಲಿಟ್ಟಿದ್ದ 50 ಸಾವಿರ ನಗದು, ಬೆಲೆಬಾಳುವ ರೇಷ್ಮೆ ಸೀರೆಗಳು, ಬಟ್ಟೆಗಳು ಹಾಗೂ ಇತರೆ ಪದಾರ್ಥಗಳು ಸುಟ್ಟು ಕರಕಲಾಗಿವೆ. ನೆರೆಹೊರೆಯಲ್ಲಿ ನಾಟಿ ಹೆಂಚಿನ ಮನೆಗಳಿದ್ದು ಬೆಂಕಿ ಕಾಣಿಸಿಕೊಂಡ ತಕ್ಷಣವೇ ನೆರೆಹೊರೆಯವರು ನೀರೆರಚಿ ಅಗ್ನಿಪ್ರಮಾದವನ್ನು ಕೊಂಚಮಟ್ಟಿಗೆ ಶಮನ ಮಾಡಿದ್ದರು. ನಂತರ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣವಾಗಿ ಬೆಂಕಿಯನ್ನು ನಂದಿಸಿದರು. ಘಟನಾಸ್ಥಳಕ್ಕೆ ಪುರಸಭಾ ಸದಸ್ಯೆ ಹೇಮಾರಾಜು, ತಿಗಳರಸಂಘದ ಅಧ್ಯಕ್ಷ ವೆಂಕಟೇಶಪ್ಪ ಮತ್ತಿತರರು ಆಗಮಿಸಿ ನೊಂದವರಿಗೆ ಸಾಂತ್ವನ ಹೇಳಿದರು.

'ಉತ್ತಮ ಪರಿಸರ ಬೇಕಿದ್ದರೆ ಗಿಡ ಮರ ಬೆಳೆಸಿ'
ಕನಕಪುರ: ಉತ್ತಮ ಪರಿಸರ, ವಾತಾವರಣ, ಗಾಳಿ, ಬೆಳಕು, ನೀರು ಸಿಗಬೇಕಿದ್ದರೆ ಗಿಡ ಮರಗಳನ್ನು ಬೆಳೆಸುವುದು ಅತ್ಯಗತ್ಯ, ಪ್ರತಿಯೊಬ್ಬರಲ್ಲಿಯೂ ಪರಿಸರ ಜಾಗೃತಿ ಮೂಡಿ ಎಲ್ಲರೂ ಸಸಿಗಳನ್ನು ನೆಟ್ಟು ಬೆಳೆಸುವಂತಾಗಬೇಕು,ನಮ್ಮ ಭೂಮಿಯನ್ನು ಮುಂದಿನ ಪೀಳಿಗೆಗೂ ಉಳಿಸಬೇಕು ಎಂದು ಕೆನರಾಬ್ಯಾಂಕ್ ಜಿಲ್ಲಾಪ್ರಬಂಧಕ ಸುಬ್ರಹ್ಮಣ್ಯ ನಕ್ಷತ್ರಿ ಹೇಳಿದ್ದಾರೆ.  ಅವರು ಸಾತನೂರು ಹೋಬಳಿ ಭೂಹಳ್ಳಿ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಿತ ವನಮಹೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಗಿಡಗಳನ್ನು ನೆಡುವ ಮೂಲಕ ನೆರವೇರಿಸಿ ನೂರಾರು ಮಕ್ಕಳಿಗೆ ಸಸಿಗಳನ್ನು ಹಂಚಿ ಮಾತನಾಡುತ್ತಿದ್ದರು. ವಲಯ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾಬಾಯಿ ಅಧ್ಯಕ್ಷತೆ ವಹಿಸಿದ್ದರು.  ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭೂಹಳ್ಳಿ ಉಮೇಶ್ ಮಾತನಾಡುತ್ತಾ, ಮನುಷ್ಯನ ಆಸೆಗಳನ್ನು ಈಡೇರಿಸುವ ಶಕ್ತಿ ಪ್ರಕೃತಿಗಿದ್ದರೂ ಮನುಷ್ಯ ತನ್ನ ದುರಾಸೆಯಿಂದ ಮರಗಳ ಮಾರಣಹೋಮ ನಡೆಸುತ್ತಿದ್ದಾನೆ. ಪ್ರಾಕೃತಿಕ ಸಂಪನ್ಮೂಲಗಳು ಕೊಳ್ಳೆಹೋಗುತ್ತಿವೆ, ಇಂದಿನ ಭೀಕರ ಬರಗಾಲಕ್ಕೂ ಮಾನವನ ದುರಾಸೆಯೇ ಕಾರಣ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement