ಅಪರಾಧ ತಡೆಗಟ್ಟುವುದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ: ನಾರಾಯಣಸ್ವಾಮಿ
ನೆಲಮಂಗಲ: ಪಟ್ಟಣದಲ್ಲಿ ಅಕ್ರಮ ಚಟುವಟಿಕೆ ಹಾಗೂ ಅಪರಾಧ ತಡೆಗಟ್ಟುವುದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಟೌನ್ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ ತಿಳಿಸಿದರು.
ಅವರು ಬುಧವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಪರಾಧ ಚಟುವಟಿಕೆ ತಡೆಯುವ ಸಭೆಯಲ್ಲಿ ಲಾಡ್ಜ್ ಮತ್ತು ಡಾಬ ಮಾಲೀಕರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಪಟ್ಟಣದಲ್ಲಿ ಅಪರಾಧ ತಡೆಗಟ್ಟುವ ಉದ್ದೇಶದಿಂದ ಡಾಬ ಮಾಲೀಕರು ಪ್ರತಿನಿತ್ಯ ರಾತ್ರಿ 10.30 ರೊಳಗೆ ತಮ್ಮ ವ್ಯಾಪಾರ ವಹಿವಾಟು ಮಾಡಬೇಕು. ಅನಧಿಕೃತ ವಾಹನ ಹಾಗೂ ಅಪರಿಚಿತರನ್ನು ಕಂಡರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಿದರೆ ರಾತ್ರಿ ವೇಳೆ ಹೆದ್ದಾರಿ ಹಾಗೂ ಸುತ್ತಮುತ್ತ ನಡೆಯುವ ಅಪರಾಧ ಚಟುವಟಿಕೆ ತಡೆಗಟ್ಟಲು ಅನುಕೂಲವಾಗುತ್ತದೆ ಎಂದರು.
ಪಟ್ಟಣದ ಲಾಡ್ಜ್ ಹಾಗೂ ರೆಸಾರ್ಟ್‌ಗಳಲ್ಲಿ ಹುಟ್ಟಿದ ಹಬ್ಬದ ಹೆಸರಿನಲ್ಲಿ ಸಮಾರಂಭ ಎಂದು ಹೇಳಿ ನಂಗನಾಚ್‌ನಂತಹ ಅಶ್ಲೀಲ ನೃತ್ಯಗಳಂತಹ ಪರಂಪರೆಗೆ ಅವಕಾಶ ಮಾಡಿಕೊಡಬಾರದು. ಲಾಡ್ಜ್‌ಗಳಿಗೆ ಬರುವ ಅಪರಿಚಿತರ ಬಗ್ಗೆ ಮಾಹಿತಿ ನೀಡುವಂತೆ ಹೇಳಿದರು. ಸಭೆಯಲ್ಲಿ ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಕೃಷ್ಣ ಹಾಗೂ ಲಾಡ್ಜ್ ಮತ್ತು ಡಾಬ ಮಾಲೀಕರು ಇದ್ದರು.