ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತಾಪಂ ಸದಸ್ಯರ ಮಾತಿಗೆ ಮನ್ನಣೆ ಇಲ್ಲ

Vishwanath S
Updated On : 6 Jun 2013, 12:41 pm

ಕ.ಪ್ರ. ವಾರ್ತೆ ,   ರಾಮನಗರ ,   ಜೂ. 5
ಅಧಿಕಾರಿಗಳು ಅಧ್ಯಕ್ಷ, ಉಪಾಧ್ಯಕ್ಷರೂ ಸೇರಿದಂತೆ ತಾಲೂಕು ಪಂಚಾಯಿತಿ ಸದಸ್ಯರ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಹಾಗಾದರೆ ತಾಲೂಕು ಪಂಚಾಯಿತಿಗೆ ಅಧಿಕಾರ ಇಲ್ಲವೇ ಎಂದು ಉಪಾಧ್ಯಕ್ಷ ಭದ್ರಯ್ಯ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ನಗರದ ಪ್ರಶಸ್ತಿ ಭವನದಲ್ಲಿ ಬುಧವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ಸದಸ್ಯರ ಅಣತಿಯಂತೆ ನಡೆದುಕೊಳ್ಳುತ್ತೀರಿ. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾ.ಪಂ.ನಿಂದ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಒದಗಿಸಲಾಗಿದೆ. ಇದಕ್ಕೆ ಕಳೆದ ನಾಲ್ಕು ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ. ಅನುದಾನ ಇಲ್ಲ ಎಂದು ಸಬೂಬು ಹೇಳುವ ಅಧಿಕಾರಿಗಳು ಜಿ.ಪಂ. ಸದಸ್ಯರು ಹೇಳುವ ಕಾಮಗಾರಿಗಳಿಗೆ ಹಣ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು. ಭದ್ರಯ್ಯ ಅವರ ಪ್ರಶ್ನೆಗೆ ಜಿ.ಪಂ. ಎಇಇ ಶ್ರೀನಿವಾಸ್ ಸಮರ್ಪಕ ಉತ್ತರ ನೀಡದೆ,  ಪರಿಶೀಲನೆ ನಡೆಸಲಾಗುವುದು ಎಂದಷ್ಟೇ ಹೇಳಿದರು.
ಇದು ತಾ.ಪಂ. ಸದಸ್ಯರಲ್ಲಿ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತು.
ತರಾಟೆಗೆ: ನಂತರ ಮಾತನಾಡಿದ ಸದಸ್ಯ ಪುಟ್ಟರಂಗಯ್ಯ, ಪ್ರಸ್ತುತ ಎಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಯಾವ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಜಿ.ಪಂ. ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ಶ್ರೀನಿವಾಸ್ ಶಾಶ್ವತ ಪರಿಹಾರಕ್ಕಾಗಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಆದರೆ ನೀರೇ ಸಿಗುತ್ತಿಲ್ಲ ಎಂದರು. ಈ ಉತ್ತರವನ್ನು ಕೇಳಿ ಕುಪಿತರಾದ ಸದಸ್ಯ ಶಂಕರಯ್ಯ ಅವರು ಎಲ್ಲೆಂದರಲ್ಲಿ ಕೊಳವೆ ಬಾವಿ ಕೊರೆಸಿದರೆ ನೀರು ಸಿಗುವುದಿಲ್ಲ. ತಜ್ಞರಿಂದ ತಪಾಸಣೆ ನಡೆಸಿ, ಸೂಕ್ತ ಸ್ಥಳದಲ್ಲಿ ಕೊಳವೆ ಬಾವಿ ಕೊರೆಸಬೇಕು. ಎಲ್ಲೆಂದರಲ್ಲಿ ಕೊಳವೆ ಕೊರೆಸಿ ಸರ್ಕಾರದ ಹಣವನ್ನು ಪೋಲು ಮಾಡಬಾರದು ಎಂದು ಸಲಹೆ ನೀಡಿದರು.
ವರದಿ ನೀಡಿ: ತಾ.ಪಂ.ನಿಂದ ಬಿಡುಗಡೆಯಾದ ಅನುದಾನ ಹಣವನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆಯೇ ಎಂದು ಮಹಾ ಲೇಖಪಾಲರಿಂದ  ಹಾಗೂ ಇಲಾಖಾ ಮಟ್ಟದಲ್ಲಿ ಆಂತರಿಕ ಲೆಕ್ಕಪರಿಶೋಧನೆ ನಡೆಸಲಾಗಿದೆಯೇ, ಹಾಗಿದ್ದರೆ ಎಲ್ಲಾ ಸದಸ್ಯರಿಗೂ ವರದಿ ನೀಡುವಂತೆ ಸದಸ್ಯ ಶಂಕರಯ್ಯ ಆಗ್ರಹಿಸಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ತಾ.ಪಂ. ಇಒ ಅವರು ರಬ್ಬರ್ ಸ್ಟಾಂಪ್ ಮಾಡಿಕೊಂಡಿದ್ದಾರೆ. 2-3 ತಿಂಗಳಿಗೊಮ್ಮೆ ಸಭೆ ನಡೆಸುತ್ತೀರಿ. ಅಭಿವೃದ್ಧಿ ಕಾಮಗಾರಿಯೂ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಅಧಿಕಾರಿಗಳು ಆಡಳಿತದಲ್ಲಿ ಪಾರದರ್ಶಕತೆ ಅಳವಡಿಸಿಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದಾಗ ಇಒ ನಾರಾಯಣಸ್ವಾಮಿ ಮತ್ತು ಶಂಕರಯ್ಯ ನಡುವೆ ವಾಗ್ವಾದ ನಡೆಯಿತು. ಮಧ್ಯೆ ಪ್ರವೇಶಿಸಿದ ಉಪಾಧ್ಯಕ್ಷ ಭದ್ರಯ್ಯ ಇಬ್ಬರನ್ನು ಸಮಾಧಾನ ಪಡಿಸಿದರು.
ತಾ.ಪಂ. ಲೆಕ್ಕಾಧಿಕಾರಿ ಮಾತನಾಡಿ, ಈವರೆಗೂ ಮಹಾಲೇಖಪಾಲರಿಂದ ಲೆಕ್ಕ ಪರಿಶೋಧನೆ ನಡೆದಿಲ್ಲ. ಇಲಾಖೆ ಮಟ್ಟದಲ್ಲಿ ಆಂತರಿಕ ಲೆಕ್ಕ ಪರಿಶೋಧನೆ ನಡೆದಿದ್ದು, ವರದಿ ಇನ್ನೂ ಬಂದಿಲ್ಲ. ಬಂದ ಕೂಡಲೇ ಎಲ್ಲಾ ಸದಸ್ಯರಿಗೂ ವರದಿ ನೀಡುವುದಾಗಿ ತಿಳಿಸಿದರು.
ಸೌಕರ್ಯಗಳ ಕೊರತೆ: ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಶುಚಿತ್ವ ಕಾಪಾಡುತ್ತಿಲ್ಲ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿಲ್ಲ, ಬಾಳೆ ಹಣ್ಣು ಮತ್ತು ಮೊಟ್ಟೆ ಇನ್ನಿತರ ಪೌಷ್ಟಿಕ ಆಹಾರಗಳು ನೀಡಬೇಕೆಂದು ಸರ್ಕಾರವೇ ನಿಗದಿಪಡಿಸಿದ್ದರೂ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಸದಸ್ಯ ಶಿವಪ್ರಸಾದ್ ಆರೋಪಿಸಿದರು.
ಎಚ್ಚರಿಕೆ: ಪ್ರತಿ ತಿಂಗಳು ವಾರ್ಡನ್‌ಗಳ ಸಭೆ ಕರೆದು ವಸತಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಬೇಕು. ಸರ್ಕಾರದ ಹಣ ದುರುಪಯೋಗವಾದ ರೀತಿಯಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು. ತಪ್ಪಿದಲ್ಲಿ ಸೂಕ್ತ ಕ್ರಮಕ್ಕಾಗಿ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಶಿವಪ್ರಸಾದ್ ಅಧಿಕಾರಿಗಳನ್ನು ಎಚ್ಚರಿಸಿದರು.  ಮಳೆ ಮಾಪನ ಅವೈಜ್ಞಾನಿಕವಾಗಿದೆ. ಯಾವುದೋ ಒಂದು ಹೋಬಳಿಯಲ್ಲಿ ಬಿದ್ದಿರುವ ಮಳೆ ಆಧರಿಸಿ ಇಡೀ ತಾಲೂಕಿನಲ್ಲಿ ಮಳೆ ಬಿದ್ದಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಬೆಳೆ ನಷ್ಟ ಉಂಟಾದರೆ ರೈತರಿಗೆ ಪರಿಹಾರ ಸೇರಿದಂತೆ ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಶಿವಪ್ರಸಾದ್ ಕೃಷಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ತಾ.ಪಂ. ಅಧ್ಯಕ್ಷೆ ಭಾನುಮತಿ ಚಿಕ್ಕಬೋರೇಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement