ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಲು ಸಲಹೆ
ಬೈರಾಪಟ್ಟಣ: ನಮ್ಮೆಲ್ಲರ ಬದುಕಿಗೆ ಆಧಾರವಾಗಿರುವ ಪರಿಸರದ ರಕ್ಷಣೆಯ ಬಗ್ಗೆ ಮಕ್ಕಳಿಗೆ ತಿಳಿಹೇಳುವ ಮೂಲಕ ಅವರಲ್ಲಿ ಪರಿಸರ ಪ್ರೇಮ ಬೆಳೆಸುವ ಕಾರ್ಯಕ್ಕೆ ಪ್ರಜ್ಞಾವಂತ ಸಮುದಾಯ ಮುಂದಾಗಬೇಕಿದೆ ಎಂದು ಆದಿತ್ಯ ಬಿರ್ಲಾ ಸೀಮೆಂಟ್ ಕಂಪನಿ ಅಧಿಕಾರಿ ಪುರುಷೋತ್ತಮ್ ಅಭಿಪ್ರಾಯಪಟ್ಟರು.
ತಾಲೂಕಿನ ಬೈರಾಪಟ್ಟಣ ಶಾಲೆಯಲ್ಲಿ ತಮ್ಮ ಸಂಸ್ಥೆ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಪರಿಸರ ಉಳಿಯ ಬೇಕಾದರೆ ನಾವೆಲ್ಲ ಪರಿಸರ ಸಂರಕ್ಷಣೆಯಬಗ್ಗೆ ಜಾಗೃತರಾಗಬೇಕಿದೆ ಎಂದರು.
ಹಸಿರೇ ಉಸಿರು ಎಂಬುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ಮಾತಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಾನವ ತನ್ನ ಅತಿ ಆಸೆಗೆ ಪರಿಸರದ ಮೇಲೆ ದೌರ್ಜನ್ಯ ಎಸಗುತ್ತಿದ್ದು ಇದನ್ನು ತಪ್ಪಿಸುವ ಕೆಲಸಕ್ಕೆ ನಾವೆಲ್ಲ ಮುಂದಾಗ ಬೇಕಿದೆ ಎಂದು ಕರೆ ನೀಡಿದರು.
ಕಾಲಕಾಲಕ್ಕೆ ತಕ್ಕಂತೆ ಮಳೆ ಬೆಳೆ ಆಗಬೇಕಿದ್ದರೆ ಪರಿಸರ ಮಾಲಿನ್ಯವಾಗದಂತೆ ನೋಡಿ ಕೊಳ್ಳಬೇಕು ನಮ್ಮಲ್ಲರಿಗೂ ಜೀವದಾತೆಯಾಗಿರುವ ಪರಿಸರದ ಬಗ್ಗೆ ನಾವು ಯಾವುದೇ ಕಾರಣಕ್ಕೂ ತಾತ್ಸಾರ ಮಾಡಬಾರದು ಎಂದವರು ತಿಳಿಸಿದರು.
ಪ್ರತಿಯೊಂದು ಮನೆಯ ಮುಂದೆ ಗಿಡ ನೆಟ್ಟು ಬೆಳೆಸುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು, ವಾತಾವರಣದಲ್ಲಿ ಮರ ಹೆಚ್ಚಾದಂತೆ ಮರಗಿಡಗಳು ಮೋಡಗಳನ್ನು ಆಕರ್ಷಿಸಿ ಮಳೆ ಬರುವಂತೆ ಮಾಡುತ್ತವೆ, ಉತ್ತಮವಾಗಿ ಮಳೆಸುರಿದರೆ ಜನಜಾನುವಾರುಗಳು ಉತ್ತಮವಾದ ಜೀವನ ನಡೆಸಬಹುದೆಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಪ್ರಹ್ಲಾದ್‌ಗೌಡ, ಇತ್ತೀಚಿನ ದಿನಗಳಲ್ಲಿ ಮಾನವನ ಸ್ವಾರ್ಥದಿಂದ ಪರಿಸರದ ಶೋಷಣೆ ಹೆಚ್ಚುತ್ತಿದ್ದು ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದರು.
ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಇನ್ನಾದರೂ ನಾವು ಪರಿಸರದ ಬಗ್ಗೆ ಕಾಳಜಿ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ನಮಗೆಲ್ಲ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ಪರಿಸರ ದಿನಾಚರಣೆಯ ದಿನ ಕೇವಲ ಮರನೆಟ್ಟು ಸುಮ್ಮನಾಗದೆ ನೆಟ್ಟ ಮರಕ್ಕೆ ನೀರೆರೆದು ಪೋಷಿಸ ಬೇಕು ನೀವು ನೆಟ್ಟ ಗಿಡಗಳ ಬಗ್ಗೆ ದಿನಾ ಜಾಗೃತಿ ವಹಿಸಿ ಅವು ಹೆಚ್ಚಿನದಾಗಿ ಬೆಳವಣಿಗೆಯಾಗುವಂತೆ ನೋಡಿಕೊಳ್ಳ ಬೇಕೆಂದು ಅವರು ತಿಳಿಸಿದರು.
ಪ್ರೌಢಶಾಲಾ ಎಸ್ ಡಿಎಂಸಿ ಅಧ್ಯಕ್ಷಚಂದ್ರಗಿರಿ ಮಾತನಾಡಿ ಮಕ್ಕಳಿಗೆ ಮನೆಯಲ್ಲಿ ತಂದೆತಾಯಿಯದವರು ಒಳ್ಳೆಯ ಗುಣಗಳನ್ನು ಕಲಿಸುವ ಪಟ್ಟಿಯಲ್ಲಿ ಸಸ್ಯಪ್ರೇಮವನ್ನು ಬೆಳೆಸಬೇಕು ಎಂದರು.
ಹಿರಿಯ ಪ್ರಾಥಮಿಕ ಶಾಲಾ ಉಸ್ತುವಾರಿ ಅಧ್ಯಕ್ಷ ಬಿ.ಸಿ.ಲಕ್ಷ್ಮಣಸ್ವಾಮಿ ಮಾತನಾಡಿ ನಾಡಿನ
ಬೃಹತ್ ಕಂಪನಿಗಳು ಪರಿಸರ ಪ್ರೇಮವನ್ನು ಬೆಳೆಸುವುದು ಮಾತ್ರವಲ್ಲದೇ ಸಲಹೆ ಸೂಚನೆಯ ಮೂಲಕ ಮಕ್ಕಳ ಮನವನ್ನು ಸೆಳೆದಿರುವುದು ಮೆಚ್ಚುವ ಕೆಲಸ ಎಂದು ಶ್ಲಾಘಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ, ಶಾಲಾ ಮುಖ್ಯಸ್ಥ ತಮ್ಮಣ್ಣ, ಗಾಯಕ ಶಾಂತಕುಮಾರ್, ಸಹಶಿಕ್ಷಕ ಸಾಗರದ ರಾಘವೇಂದ್ರಮಯ್ಯ, ಸಾಲಿಗ್ರಾಮಮಂಜುನಾಥ ಇದ್ದರು.