ಮಾಜಿ ಸಚಿವ ಎನ್. ಚಿಕ್ಕೇಗೌಡ ನಿಧನ
ಹೊಸಕೋಟೆ: ಮಾಜಿ ಸಚಿವ ಎನ್. ಚಿಕ್ಕೆಗೌಡ (87) ಅವರು ಮಂಗಳವಾರ ಬೆಳಗ್ಗೆ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಮೂಲತಃ ಬೆಂ.ಗ್ರಾಮಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಮದವರಾದ ಚಿಕ್ಕೆಗೌಡರು, 1968ರಲ್ಲಿ ಪ್ರಥಮ ಬಾರಿಗೆ ಹೊಸಕೋಟೆಯಿಂದ ಶಾಸಕರಾಗಿ, 1972ರಲ್ಲಿ ದೇನರಾಜ ಅರಸು ಮಂತ್ರಿಮಂಡಲದಲ್ಲಿ ಪಶುಸಂಗೋಪನಾ ಸಚಿವರಾಗಿದ್ದರು. ಎಸ್.ಬಂಗಾರಪ್ಪ ಮಂತ್ರಿಮಂಡಲದಲ್ಲಿ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದರು. ಅವರಿಗೆ ಮಗ, ಇಬ್ಬರು ಪುತ್ರಿಯರಿದ್ದಾರೆ. ಶಾಸಕ ಎನ್. ನಾಗರಾಜ್, ಮಾಜಿ ಸಚಿವ ಬಿ.ಎನ್. ಬಚ್ಚೇಗೌಡರು ಹಾಗೂ ಜಿಲ್ಲಾ ಉತ್ಸವಾರಿ ಸಚಿವ ಕೃಷ್ಣ ಭೈರೆಗೌಡ ಸಾಂತ್ವನ ಹೇಳಿದರು.
ದೇವನಹಳ್ಳಿಯಲ್ಲಿ ವಿಶ್ವ ಪರಿಸರ ದಿನಾಚರಣೆ
ದೇವನಹಳ್ಳಿ: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ಸಸಿ ನೆಡುವ ಕಾರ್ಯಕ್ರಮ ಮತ್ತು ಪರಿಸರ ಉಳಿಸುವಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಜಾಥವನ್ನು ಕಾಲೇಜು ಆಭಿವೃದ್ಧಿ ಸಮಿತಿಯವರು ಹಾಗೂ ಶಿಕ್ಷಕರು ಬುಧವಾರ ಆಯೋಜಿಸಿದ್ದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ನಾಗರತ್ನ ಬಡಿಗೇರ ಅವರು ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಾದಂತೆ ಮತ್ತು ಪಟ್ಟಣಗಳು ಬೆಳೆದಂತೆ ಕಾಡೆಲ್ಲ ನಾಶವಾಗಿ ಕಾಂಕ್ರೀಟ್ ಮಯವಾಗಿ ಪರಿಸರ ನಾಶವಾಗುತ್ತಾ ಬಂದಿದೆ ಎಂದರು. ಕಾಲೇಜಿನ ಉಪನ್ಯಾಕ ಗುರುರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಕೆಂಚನಗೌಡ, ಶರಣಯ್ಯ ಮಾಸ್ಟರ್ ಇದ್ದರು.
ಬಹುಮಾನಕ್ಕೆ ಲೇಖಕರಿಂದ ಅರ್ಜಿ
ರಾಮನಗರ: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು ಮತ್ತು ಗಟ್ಟದ ಕೋರೆ), ಮೂಡಲ ಪಾಯ, ಯಕ್ಷಗಾನ ಬೊಂಬೆಯಾಟ (ಸೂತ್ರದ ಮತ್ತು ತೊಗಲು ಬೊಂಬೆ), ಶ್ರೀ ಕೃಷ್ಣ ಪಾರಿಜಾತ, ಸಣ್ಣಾಟ, ದೊಡ್ಡಾಟ, ಇತ್ಯಾದಿ ಪ್ರಕಾರಗಳಲ್ಲಿ 2011-12ನೇ ಸಾಲಿನ ಕ್ಯಾಲೆಂಡರ್ ವರ್ಷಗಳಲ್ಲಿ ಪ್ರಕಟಿಸುವ ಪುಸ್ತಕಗಳನ್ನು ಬಹುಮಾನಕ್ಕೆ ಲೇಖಕರಿಂದ ಅರ್ಜಿ ಆಹ್ವಾನಿಸಿದೆ. ಬಹುಮಾನದ ಮೊತ್ತ ರು.5000, ಯಾವುದೇ ಪಠ್ಯಕ್ಕಾಗಿ ಸಿದ್ಧಪಡಿಸಿದ ಗ್ರಂಥ, ಅಭಿನಂದನಾ ಗ್ರಂಥ, ಸಂಸ್ಮರಣ ಗ್ರಂಥ, ಪಿಹೆಚ್ಡಿ ಪ್ರಬಂಧಗಳನ್ನು ಪರಿಗಣಿಸಲಾಗುವುದಿಲ್ಲ. ಒಮ್ಮೆ ಬಹುಮಾನಕ್ಕೆ ಬಂದ ಪುಸ್ತಕವನ್ನು ಪುನಃ ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ದೂ.080-22113146 ಸಂಪರ್ಕಿಸಬಹುದು. ಪುಸ್ತಕಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ಕಳುಹಿಸಬೇಕು.
ಪದವಿ ಪೂರ್ವ ಕಾಲೇಜುಗಳ ಸಭೆ
ರಾಮನಗರ: 2013-14ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅನುಸರಿಸಬೇಕಾದ ನಿಯಮಗಳು ನಿಬಂಧನೆಗಳು ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಚಾರಗಳ ಬಗೆ ಚರ್ಚಿಸಲು ಜೂನ್ 7 ರಂದು ಬೆಳಿಗ್ಗೆ 11ಕ್ಕೆ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ರಾಮನಗರ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಸಭೆ ಕರೆಯಲಾಗಿದೆ.
ಬೆಸ್ಕಾಂನಿಂದ ಗ್ರಾಹಕರ ಸಭೆ
ರಾಮನಗರ: ಬೆಸ್ಕಾಂನಿಂದ ಚನ್ನಪಟ್ಟಣ ಗ್ರಾಮೀಣ ಉಪ ವಿಭಾಗೀಯ ಕಚೇರಿ ಆವರಣದಲ್ಲಿ ಜೂ.7ರ ಮಧ್ಯಾಹ್ನ 3 ರಿಂದ 5ರವರೆಗೆ ಗ್ರಾಹಕರ ಸಭೆ ನಡೆಯಲಿದೆ. ತಾಲೂಕಿನ ಬೆಸ್ಕಾಂ ಗ್ರಾಹಕರು ತಮ್ಮ ಕುಂದುಕೊರತೆಗಳನ್ನು ಈ ಸಭೆಯಲ್ಲಿ ಪರಿಹರಿಸಿಕೊಳ್ಳಬಹುದು ಎಂದು ಉಪ ವಿಭಾಗದ ಎಇಇ ತಿಳಿಸಿದ್ದಾರೆ.
ಜೂಜು ಕಟ್ಟೆಯ ಮೇಲೆ ದಾಳಿ
ಚನ್ನಪಟ್ಟಣ: ಜೂಜು ಕಟ್ಟೆಯ ಮೇಲೆ ದಾಳಿಮಾಡಿದ ಗ್ರಾಮಾಂತರ ಪೊಲೀಸರು 5 ಮಂದಿ ಜೂಜು ಕೋರರನ್ನು ಬಂಧಿಸಿ 17150 ರು. ಹಣವನ್ನು ವಶಪಡಿಸಿ ಕೊಂಡಿರುವ ಘಟನೆ ತಾಲೂಕಿನ ಮೈಲನಾಯ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದೇವರಾಜು, ನಾಗರಾಜು, ನಟರಾಜು, ಮಂಜ, ರೇಣುಕಯ್ಯ ಬಂಧಿತ ಜೂಜುಕೋರರು, ಗ್ರಾಮದ ಹೊರವಲಯದಲ್ಲಿರುವ ತೋಟದಲ್ಲಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿನಡೆಸಿದ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಅಭಿವ್ಛದ್ಧಿ ಹೆಸರಿನಲ್ಲಿ ಪರಿಸರ ನಾಶ ಅವ್ಯಾಹತ
ಚನ್ನಪಟ್ಟಣ: ಅಭಿವೃದ್ಧಿಯ ಹೆಸರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಪರಿಸರದ ಮೇಲಿನ ದೌರ್ಜನ್ಯದಿಂದಾಗಿ ಸಾವಿರಾರು ವರ್ಷಗಳಿಂದ ಜೀವರಾಶಿಗಳನ್ನು ಸಲಹುತ್ತಾ ಬಂದಿರುವ ಪರಿಸರ ಇದೀಗ ಅಪಾಯಕ್ಕೆ ಸಿಲುಕಿದೆ ಎಂದು ಕೇಂಬ್ರಿಡ್ಜ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್.ಲಿಂಗೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದರು. ರಿಸರ ದಿನಾಚರಣೆಯ ಅಂಗವಾಗಿ ತಮ್ಮ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಪರಿಸರ ಮಾನವನ ಆಸೆಗಳನ್ನು ಪೂರೈಸುತ್ತದೆಯೇ ವಿನಾ ದುರಾಸೆಗಳನ್ನಲ್ಲ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ನಿಂಗೇಗೌಡ, ಪ್ರಾಂಶುಪಾಲೆ ರೇಣುಕಾದೇವಿ, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.