ಕಬ್ಬುಬಾಕಿ ಪಾವತಿಗೆ ಆಗ್ರಹಿಸಿ ರೈತರ ಪ್ರತಿಭಟನೆ
ಭಾರತೀನಗರ: ಕಬ್ಬು ಸರಬರಾಜು ಮಾಡಿರುವ ರೈತರಿಗೆ ಬಾಕಿ ಹಣ ಪಾವತಿ ಮಾಡಲು ವಿಫಲವಾಗಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಧೋರಣೆ ಖಂಡಿಸಿ ನೂರಾರು ರೈತರು ಕಾರ್ಖಾನೆ ಎದುರು ಹಮ್ಮಿಕೊಂಡಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.
ಕಳೆದ ಒಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಬುಧವಾರ ಕೂಡ ಕಾರ್ಖಾನೆಗೆ ತೆರಳುತ್ತಿದ್ದ ಕಾರ್ಮಿಕರನ್ನು ಹಾಗೂ ಸರಕು ಲಾರಿಗಳನ್ನು ಕಾರ್ಖಾನೆ ಒಳಗೆ ಬಿಡದಂತೆ ರೈತರು ತಡೆಹಿಡಿದಿದ್ದಾರೆ.
ರೈತರ ಒತ್ತಾಯದ ಮೇರೆಗೆ ಬುಧವಾರ ತಹಸೀಲ್ದಾರ್ ನಾಗರಾಜು ಮಧ್ಯ ಪ್ರವೇಶಿಸಿ, ಚಾಂಷುಗರ್ ಆಡಳಿತ ಮಂಡಳಿ ಜೊತೆ 3 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ, ರೈತರಿಗೆ ಬಾಕಿ ಹಣ ಪಾವತಿ ಮಾಡಿಸಲು ಮುಂದಾದರು. ಆದರೆ ತಹಸೀಲ್ದಾರ್ ಮಾತಿಗೆ ಆಡಳಿತ ಮಂಡಳಿ ಸ್ಪಂದಿಸದ ಹಿನ್ನಲೆಯಲ್ಲಿ ಮಾತುಕತೆ ವಿಫಲವಾಯಿತು.
ಕಾರ್ಖಾನೆಯ ಡಿಸ್ಟಿಲರಿ ವಿಭಾಗಕ್ಕೆ ಸಂಬಂಧಿಸಿದ ವ್ಯವಸ್ಥಾಪಕರು ಸಮಜಾಹಿಸಿ ನೀಡಲು ಮುಂದಾದರು. ಈ ಸಂದರ್ಭ ಆಕ್ರೋಶಗೊಂಡ ರೈತರು ಪ್ರಯೋಜನಕ್ಕೆ ಬಾರದ ಯಾವುದೇ ಅಧಿಕಾರಿಗಳು ಇಲ್ಲಿಗೆ ಬರುವುದು ಬೇಡ. ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ಅಧಿಕಾರಿಗಳು ಬರಬೇಕೆಂದು ಆಗ್ರಹಿಸಿದರು. ಇಲ್ಲದಿದ್ದರೆ ತಾಳ್ಮೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.