'ಮಾಸ್ತಿ ತತ್ವ, ಆದರ್ಶ ಪಾಲನೆಯಿಂದ ಉತ್ತಮ ಜೀವನ ಸಾಧ್ಯ'
ಕೆಜಿಎಫ್: ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ 122ನೇ ಜನ್ಮದಿನಾಚರಣೆ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾಸ್ತಿ ಸ್ಮರಣೆ ಅಂಗವಾಗಿ ವಿಚಾರ ಸಂಕಿರಣ ನಗರದ ಕನ್ನಡ ಸಂಘದ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಸಂಘದ ಅಧ್ಯಕ್ಷ ನರಸಿಂಹೇಗೌಡ ನಾರಣಾಪುರ ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಜನ್ಮದಿನ ರಾಜ್ಯದ ಹಬ್ಬದ ದಿನವಾಗಿದ್ದು ಇಂದಿನ ಯುವಕರು ಮತ್ತು ವಿದ್ಯಾರ್ಥಿಗಳು ಮಾಸ್ತಿ ತತ್ವ ಸಿದ್ದಾಂತ ಪಾಲಿಸಿದ್ದಲ್ಲಿ ತಮ್ಮ ಮುಂದಿನ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಮಹಾವೀರ್ ಜೈನ್ ಕಾಲೇಜಿನ ಉಪನ್ಯಾಸಕಿ ಬಿ.ಕೆ.ಮಂಜುಳ ಅವರು ಮಾಸ್ತಿ ಜೀವನ ಚರಿತ್ರೆ, ಸಾಹಿತಿ, ಕಥೆ ಕವನಗಳ ಬಗ್ಗೆ ಉಪನ್ಯಾಸ ನೀಡಿ ಕಿಶೋರ್ಕುಮಾರ್ ತಂಡದವರೊಂದಿಗೆ ಸಂವಾದ ನಡೆಸಿದರು. ಶಾಲಾ ಮಕ್ಕಳಿಂದ ನಾಡ ಗೀತೆ ಹಾಗೂ ಮಾಸ್ತಿ ಕಾವ್ಯವಾಚನ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರವೆಂಕಟಪ್ಪ, ಬಂಗಾರಪೇಟೆ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಕೋಗಿಲಹಳ್ಳಿ ಕೃಷ್ಣಪ್ಪ, ವಿ.ಬಿ.ದೇಶಪಾಂಡೆ, ಮಂಜುನಾಥಕೃಷ್ಣ ಹೆಗಡೆ, ಪೀತಾಂಬರರಾವ್ ಉಪಸ್ಥಿತರಿದ್ದರು.