ಈಜಲು ಹೋಗಿ ಶಾಲಾ ಬಾಲಕರ ಸಾವು
ಆನೇಕಲ್ಲು: ಶಾಲಾ ಸಮಯದ ನಂತರ ಕೆರೆಯಲ್ಲಿ ಈಜಲು ಹೋದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಹೊನ್ನ ಕಳಸಾಪುರ ಕೆರೆಯಲ್ಲಿ ನಡೆದಿದೆ. ಮೃತ ಪಟ್ಟವರನ್ನು ದಿವಾಕರ್(12) ಹಾಗೂ ಅಭಿಲಾಶ್(13) ಎಂದು ಗುರುತಿಸಲಾಗಿದೆ. ಪಟ್ಟಣದ ಸರಸ್ವತಿ ವಿದ್ಯಾ ಮಂದಿರದಲ್ಲಿ 8ನೇ ತರಗತಿ ಓದುತ್ತಿದ್ದ ಗೆಳೆಯರು ಗುರುವಾರ ಶಾಲಾ ಸಮಯದ ನಂತರ ಇತರ ಗೆಳೆಯರ ಜೊತೆ ಈಜಲು ತೆರಳಿದ್ದರು. ಈಜು ಬಾರದ ಇವರಿಬ್ಬರೂ ನೀರಿನಲ್ಲಿ ಮುಳುಗಿದರು ಎನ್ನಲಾಗಿದೆ. ಕೆರೆಯ ದಡದಲ್ಲಿ ಮೂರು ಜೊತೆ ಬಟ್ಟೆಗಳಿದ್ದು ಇನ್ನೊಬ್ಬ ವಿದ್ಯಾರ್ಥಿಯ ಬಗ್ಗೆ ಶಂಕೆ ಮೂಡಿತ್ತು. ಆದರೆ ಇದುವರೆವಿಗೂ ಯಾವುದೇ ದೂರು ಬರದ ಕಾರಣ ಜೊತೆಯಲ್ಲಿದ್ದ ಇನ್ನೊಬ್ಬ ಬಾಲಕ ಹೆದರಿಕೆಯಿಂದ ಮನೆ ಸೇರಿಸಬಹುದು ಎಂದು ಆನೇಕಲ್ ಪೊಲೀಸರು ತಿಳಿಸಿದ್ದಾರೆ. ದಿವಾಕರ ತಂದೆ ತಾಯಿಯವರಾದ ಪ್ರಕಾಶ್ ಮತ್ತು ಮೀನ ದಂಪತಿಗಳ ರೋದನ ಮುಗಿಲು ಮುಟ್ಟಿತು. ಅಭಿಲಾಶ್ ಅವರ ಅಜ್ಜಿ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ಶವ ಪರೀಕ್ಷೆ ನಡೆದು ವಾರಸುದಾರರಿಗೆ ಶವ ನೀಡಲಾಯಿತು.