ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರೇಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆತಡೆ

Rashmi Kasaragodu
Updated On : 8 Jun 2013, 12:29 pm

ಕ.ಪ್ರ.ವಾರ್ತೆ  ದೊಡ್ಡಬಳ್ಳಾಪುರ  ಜೂ.7
ದೊಡ್ಡಬಳ್ಳಾಪುರ ಜನರ ಬಹುದಿನಗಳ ಬೇಡಿಕೆಯಾಗಿರುವ ಡಿಕ್ರಾಸ್ ಬಳಿಯ ರೇಲ್ವೇ ಹಳಿಯ ಬಳಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಅಲ್ಲದೆ ಇದರ ಬಳಿಯೇ ಇರುವ ರಸ್ತೆ ಸೇತುವೆಯನ್ನು ಅಗಲೀಕರಣ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ಮೇಲ್ಸೇತುವೆ ನಿರ್ಮಾಣ ಮತ್ತು ಸೇತುವೆ ಅಗಲೀಕರಣದ ಬೇಡಿಕೆಗಳಿಗೆ ದಶಕಗಳೇ ಕಳೆದಿವೆ. ಆದರೆ ಈವರೆಗೆ ಯಾವುದೇ ಕೆಲಸವಾಗಿಲ್ಲ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಮತ್ತು ರೈಲ್ವೇ ಇಲಾಖೆಗೆ ಹಲವು ಮನವಿಗಳನ್ನು ಕೊಟ್ಟರೂ ಇತ್ತ ತಿರುಗಿ ನೋಡಿಲ್ಲ. ಈ ರೈಲ್ವೇ ಹಳಿಯ ಮುಖಾಂತರವೇ ರಾಷ್ಟ್ರೀಯ ಹೆದ್ದಾರಿ 207 ಮತ್ತು ಹಿಂದುಪುರ-ಬೆಂಗಳೂರು ರಾಜ್ಯ ಹೆದ್ದಾರಿ ಹಾದುಹೋಗುತ್ತದೆ. ದಿನೇ ದಿನೇ ಹೆದ್ದಾರಿಗಳಲ್ಲಿ ವಾಹನದಟ್ಟಣೆ ಹೆಚ್ಚುತ್ತಿದ್ದು ಒಂದು ಬಾರಿ ರೇಲ್ವೇ ಗೇಟ್ ಹಾಕಿದರೆ ಕನಿಷ್ಠ 45 ನಿಮಿಷದಿಂದ 1 ಗಂಟೆ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದರು.
ಅಲ್ಲದೆ ರಸ್ತೆ ಸೇತುವೆ ಶಿಥಿಲಗೊಂಡಿದ್ದು, ತೀರಾ ಕಿಷ್ಕಿಂದವಾಗಿದೆ. ಭಾರೀ ವಾಹನಗಳ ಓಡಾಟದಿಂದ ಕುಸಿದು ಬೀಳುವ ಆತಂಕವೂ ಇದೆ. ಹೀಗಾಗಿ ಕೂಡಲೇ ಈ ರಸ್ತೆ ಸೇತುವೆಯನ್ನು ಪುನರ್ ನಿರ್ಮಿಸಬೇಕು. ಅಗಲೀಕರಣ ಮಾಡಬೇಕು. ಜೊತೆಗೆ ರೇಲ್ವೇ ಹಳಿಯ ಮೇಲೆ ಫ್ಲೈಓವರ್ ಅಥವಾ ಹಳಿಯ ಕೆಳಗೆ ಅಂಡರ್‌ಪಾಸ್ ನಿರ್ಮಿಸಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ. ಬೇಡಿಕೆ ಈಡೇರದಿದ್ದಲ್ಲಿ ರೈತ ಸಂಘ ಹಲವು ಸಂಘಟನೆಗಳೊಂದಿಗೆ ವ್ಯಾಪಕ ಹೋರಾಟ ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಸುಲೋಚನಮ್ಮ ಡಾ.ವೆಂಕಟರೆಡ್ಡಿ, ಬಚ್ಚಳ್ಳಿ ಸತೀಶ್, ವಕೀಲ ಸತೀಶ್, ನಾರಾಯಣಸ್ವಾಮಿ, ರವಿಶಿರವಾರ, ಕಾಡನೂರು ಹನುಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement