ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹಣ ವಸೂಲಿಗೆ ಸದನ ಸಮಿತಿ ಶಿಫಾರಸು

Rashmi Kasaragodu
Updated On : 8 Jun 2013, 12:25 pm

ವಿಧಾನಸಭೆ: ರಾಮನಗರ ಜಿಲ್ಲೆ ಮಾಗಡಿಯಲ್ಲಿ ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದು, 26.72 ಕೋಟಿ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕು ಎಂದು ಸದನ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸದೆ ಪಾವತಿಸಿದ ಮೊತ್ತದಲ್ಲಿ 25.52 ಕೋಟಿ ಹಾಗೂ ರಾಜ್ಯ ಹೆದ್ದಾರಿ ಕಾಮಗಾರಿಗಳಲ್ಲಿ ಪಾವತಿಸಿದ 1.19 ಕೋಟಿ ಸೇರಿದಂತೆ ಒಟ್ಟು 26.72 ಕೋಟಿಯನ್ನು ತಪ್ಪಿಸ್ಥರಿಂದ ವಸೂಲಿ ಮಾಡಬೇಕು ಎಂದು ಸದನ ಸಮಿತಿ ಅಭಿಪ್ರಾಯಪಟ್ಟಿದೆ.
ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದಾಗ ರಾಮನಗರ ಜಿಲ್ಲೆಯ ಲೋಕೋಪಯೋಗಿ ಇಲಾಖೆಯಲ್ಲಿ ಮಾಗಡಿ ಉಪವಿಭಾಗಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಮಂಜೂರಾಗಿದೆ. ಈ ಬಾಬ್ತಿನಲ್ಲಿ ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಒಂದೇ ಕಾಮಗಾರಿಯನ್ನು ಪ್ರತ್ಯೇಕವಾಗಿ ವಿಂಗಡಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು 2012ರ ಡಿಸೆಂಬರ್ 10ರಂದು ಪ್ರಸ್ತಾಪಿಸಿದ್ದರು. ಈ ಸಂಬಂಧ ಶಾಸಕ ಅಪ್ಪಸಾಹೇಬ ಮಲ್ಲಪ್ಪ ಪಟ್ಟಣಶೆಟ್ಟಿ ಅಧ್ಯಕ್ಷತೆಯಲ್ಲಿ 6 ಸದಸ್ಯರ ಸದನ ಸಮಿತಿ ರಚಿಸಲಾಗಿತ್ತು. ಈ ಸದನ ಸಮಿತಿ ವರದಿ ನೀಡಿದ್ದು, ಇದನ್ನು ವಿಧಾನಸಭೆ ಕಾರ್ಯದರ್ಶಿ ಪಿ.ಓಂಪ್ರಕಾಶ್ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದರು.
ಒಟ್ಟು 831 ಕಾಮಗಾರಿಗಳಿಗೆ ಅಲ್ಪಾವಧಿ ಟೆಂಡರ್ ಪ್ರಕಟಣೆಗಳನ್ನು ಹೊರಡಿಸಿದ್ದು, 246ಕ್ಕೆ ಪ್ರಾಧಿಕಾರದ ಅನುಮೋದನೆ ಪಡೆಯಲಾಗಿದೆ. ಉಳಿದ 585 ಕಾಮಗಾರಿಗಳಿಗೆ ಅನುಮೋದನೆ ಇಲ್ಲದೆ ಕಾರ್ಯಪಾಲಕ ಎಂಜಿನಿಯರ್ ಟೆಂಡರ್ ಪ್ರಕಟಿಸಿ ಪಾರದರ್ಶಕ ನಿಯಮ ಉಲ್ಲಂಘಿಸಿದ್ದಾರೆ. 2011-12ನೇ ಸಾಲಿನಲ್ಲಿ ಒಟ್ಟು 1577 ಕಾಮಗಾರಿಗಳಲ್ಲಿ 54 ಟೆಂಡರ್ ಆಹ್ವಾನಿಸಲಾಗಿದೆ. ಇದರಲ್ಲಿ 1306 ಕಾಮಗಾರಿಗಳಿಗೆ 28 ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಶೇ. 68 ಕಾಮಗಾರಿಗಳನ್ನು ಕೆಂಪರಾಜ, ಶಂಕರ ಮತ್ತು ನಂಜಯ್ಯ ಎಂಬವರಿಗೇ ಗುತ್ತಿಗೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ವರದಿ ತಿಳಿಸಿದೆ.
ಸರ್ಕಾರದಿಂದ ಮಂಜೂರಾದ ಅನುದಾನವನ್ನು ಇಲಾಖೆಗೆ ತಿಳಿಸದೆ ಆಂತರಿಕ ಆರ್ಥಿಕ ಸಲಹೆಗಾರರು ಹಾಗೂ ವಿಶೇಷ ಕಾರ್ಯದರ್ಶಿಗಳು ಬಿಡುಗಡೆ ಮಾಡಿದ್ದು, ಮಂಜೂರಾಗಿದ್ದಕ್ಕಿಂತ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ.
ಮಾಗಡಿಗೆ ಸಿಂಹಪಾಲು: ಯೋಜನೇತರ ಶೀರ್ಷಿಕೆಗಳಲ್ಲಿ ಮಂಜೂರಾಗುವ ಅನುದಾಗಳನ್ನು ವಲಯದಲ್ಲಿನ ಅಧಿಕಾರಿಗಳು ವಿಭಾಗಗಳಿಗೆ ಅಗತ್ಯಾನುಸಾರ ನಿಷ್ಪಕ್ಷಪಾತವಾಗಿ ಹಂಚಿಕೆ ಮಾಡಬೇಕು. ಆದರೆ, ಅಧೀಕ್ಷಕ ಎಂಜಿನಿಯರ್ ಮಾಗಡಿ ಉಪ ವಿಭಾಗಕ್ಕೇ ಸಿಂಹಪಾಲು ಅನುದಾನ ಮಾಡಿದ್ದು, ಕರ್ತವ್ಯ ಲೋಪ ಎಸಗಿದ್ದಾರೆ. ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು.
ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ ನೀಡುವಾಗ ಅಧೀಕ್ಷಕ ಎಂಜಿನಿಯರ್ ಕೆಳಗಿನ ಹಂತದ ಅಂದಾಜುಗಳನ್ನು ಪರಿಶೀಲಿಸದೆ ಯಥಾವತ್ತಾಗಿ ಅನುಮೋದನೆ ನೀಡಿದ್ದಾರೆ. ಕಾರ್ಯಪಾಲಕ ಎಂಜಿನಿಯರ್ ಸಹ ಅನುಮೋದನೆಯ ಆದೇಶದಲ್ಲಿ ವಿಧಿಸಲಾಗಿರುವ ಷರತ್ತು ಪಾಲಿಸದೆ ಕರ್ತವ್ಯ ಲೋಪ ಎಸಗಿದ್ದಾರೆ.
ಕಾರ್ಯಪಾಲಕ ಎಂಜಿನಿಯರ್ ಕಾಮಗಾರಿಗಳಿಗೆ ಸಂಬಂಧಿಸಿದ ಅನುದಾನವನ್ನು ಮಂಜೂರು ಮಾಡಲು ಕಳುಹಿಸುವ ಪ್ರಸ್ತಾವನೆಯಲ್ಲಿ ಒಂದೇ ರಸ್ತೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಒಟ್ಟಿಗೆ ಪ್ರಸ್ತಾಪಿಸದೆ ಪ್ರತ್ಯೇಕ ಕಾಮಗಾರಿಗಳಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಟೆಂಡರ್ ಪ್ರಕ್ರಿಯೆಗಳಲ್ಲೂ ಪಾರದರ್ಶಕ ನಿಯಮ ಹಾಗೂ ಸರ್ಕಾರದ ಆದೇಶಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದು ಅಕ್ರಮ ಎಸಗಿದ್ದಾರೆ.
ಗುತ್ತಿಗೆದಾರರಿಂದ ಹಣ ಹಿಂಪಡೆಯಬೇಕು: ಕಾಮಗಾರಿಗಳ ಅಂದಾಜುಗಳನ್ನು ಇಲಾಖೆ ಶಾಖಾಧಿಕಾರಿಗಳು ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಾಸ್ತವಾಂಶಗಳನ್ನು ಪರಿಗಣಿಸಿ ಕಾಮಗಾರಿ ಅಗತ್ಯಕ್ಕೆ ವಿಶಿಷ್ಟ ವಿವರಣೆ ನೀಡಿ ಅಂದಾಜು ತಯಾರಿಸಬೇಕು.
ಆದರೆ, ಕ್ಷೇತ್ರದ ಶಾಸಕರು ನೀಡಿದ ಪತ್ರವನ್ನು ಯಥಾವತ್ತಾಗಿ ಅಳವಡಿಸಿಕೊಂಡು ಕರ್ತವ್ಯ ಲೋಪ ಎಸಗಿದ್ದಾರೆ. ಕಾಮಗಾರಿಗಳಲ್ಲಿ ಗುತ್ತಿಗೆದಾರರು ಅಗತ್ಯ ಗುಣಮಟ್ಟದ ಕಾಮಗಾರಿ ನಿರ್ವಹಿಸಿಲ್ಲ. ಅದನ್ನು ಅವರಿಂದ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಕಾಮಗಾರಿ ನಡೆಸದೆ ಪಡೆದಿರುವ ಹಣವನ್ನು ಅವರಿಂದ ವಾಪಸ್ ಪಡೆಯಬೇಕು.
ಈ ಪ್ರಕರಣವು ರಾಜ್ಯದಲ್ಲಿಯೇ ಬೃಹತ್ ಮೊತ್ತದ ಅವ್ಯವಹಾರದ್ದಾಗಿದ್ದು, ಇಂತಹ ಘಟನೆಗಳು ರಾಜ್ಯದ ಅಭಿವೃದ್ಧಿಗೆ ಮಾರಕ. ಇದು ಮರುಕಳಿಸದಂತೆ, ಈ ಪ್ರಕರಣದಿಂದ ಪಾಠ ಕಲಿಸುವ ದೃಷ್ಟಿಯಿಂದ ನಿರಪರಾಧಿಗಳನ್ನು ಹೊರತುಪಡಿಸಿ ಕೆಳಗಿನ ಹಂತದಿಂದ ಮೇಲಿನ ಹಂತದವರೆಗೆ ಭಾಗಿಯಾಗಿರುವ ಎಲ್ಲ ಅಧಿಕಾರಿ-ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ನಷ್ಟವಾಗಿರುವ ಹಣವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು ಎಂದು ಸದನ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement