ದೇವಸ್ಥಾನದ ಚಿನ್ನಾಭರಣ ಲೂಟಿ
ರಾಮನಗರ: ದೇವಸ್ಥಾನದ ಬಾಗಿಲು ಒಡೆದು ಒಳ ನುಗ್ಗಿರುವ ಕಳ್ಳರು ದೇವರ ಕೊರಳಲ್ಲಿದ್ದ ತಾಳಿ ಸೇರಿದಂತೆ ಚಿನ್ನ ಮತ್ತು ಬೆಳ್ಳಿ ಆಭರಣ ಹಾಗೂ 2 ಹುಂಡಿಗಳನ್ನು ಕಳವು ಮಾಡಿದ್ದಾರೆ. ಬಿಡದಿಯ ಬಿ.ಹೊಸೂರು ಗ್ರಾಮದ ಪದ್ಮಾವತಿ ಮತ್ತು ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ದೇವಸ್ಥಾನದ ಅರ್ಚಕರು ಎಂದಿನಂತೆ ಪೂಜೆ ಮಾಡಲು ದೇವಸ್ಥಾನಕ್ಕೆ ತೆರಳಿದಾಗ ಕಳ್ಳತನ ನಡೆದಿರುವುದು ತಿಳಿದಿದೆ. ಕಬ್ಬಿಣದ ಬೀರುವಿನಲ್ಲಿದ್ದ ಸುಮರು 30 ಸಾವಿರ ಬೆಲೆ ಬಾಳುವ ಒಂದು ಬೆಳ್ಳಿ ಕಿರೀಟ, ಒಂದು ಜೊತೆ ಬೆಳ್ಳಿಯ ಪಾದದ ಕಿರೀಟ, 12 ಗ್ರಾಂ. ಚಿನ್ನದ ಸರ ಮತ್ತು ಲಕ್ಷ್ಮಿದೇವಿ ವಿಗ್ರಹದ ಕೊರಳಲ್ಲಿದ್ದ 6 ಗ್ರಾಂ. ಚಿನ್ನದ ತಾಳಿ, ಗುಂಡುಗಳು, ಪದ್ಮಾವತಿ ದೇವಿ ವಿಗ್ರಹದ ಕೊರಳಲ್ಲಿದ್ದ 6 ಗ್ರಾಂ. ಚಿನ್ನದ ತಾಳಿ ಮತ್ತು ಗುಂಡುಗಳು ಹಾಗೂ ಹಾಲ್ನಲ್ಲಿದ್ದ 2 ಹುಂಡಿಗಳನ್ನು ಕಳವು ಮಾಡಿ, ಹುಂಡಿಯನ್ನು ಒಡೆದು ಅದರಲ್ಲಿದ್ದ ಸುಮಾರು 15 ಸಾವಿರ ತೆಗೆದುಕೊಂಡು, ಹುಂಡಿಯನ್ನು ಊರ ಹೊರಗಿನ ತೋಟಮೊಂದರಲ್ಲಿ ಬಿಸಾಡಿದ್ದಾರೆ. ಈ ಸಂಬಂಧ ದೇವಸ್ಥಾನದ ಅರ್ಚಕ ಯೋಗೇಶಸ್ವಾವು ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.