ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವರದಕ್ಷಿಣೆ ತರಲಿಲ್ಲವೆಂದು ಮನೆ ಬಿಟ್ಟು ಹೋದ ಪತಿ

Rashmi Kasaragodu
Updated On : 9 Jun 2013, 12:17 pm

ಚನ್ನಪಟ್ಟಣ: ಕೇಳಿದಷ್ಟು ವರದಕ್ಷಿಣೆ ನೀಡಲಿಲ್ಲ ಎಂದು ಪ್ರೀತಿಸಿ ಮದುವೆಯಾದ ಯುವತಿಯನ್ನು ಕೈ ಬಿಟ್ಟು ಪತಿ ಪರಾರಿಯಾಗಿರುವ ಘಟನೆ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆ ಹುಣಸಗಿ ಗ್ರಾಮದ ಚನ್ನಕುಮಾರ್ ಬ್ಯಾಕೋಡು ಪತ್ನಿಗೆ ಕೈ ಕೊಟ್ಟ ಪತಿ. ಪಟ್ಟಣದ ಅಂಬೇಡ್ಕರ್ ನಗರದ ಸರಸ್ವತಿ ಪತಿಯಿಂದ ವಂಚಿತವಾದವರು.
ಎರಡು ವರ್ಷಗಳ ಹಿಂದೆ ಪಟ್ಟಣದಲ್ಲಿ ಕೇಬಲ್ ಕೆಲಸಕ್ಕೆಂದು ಯಾದಗಿರಿ ಜಿಲ್ಲೆ ಹುಣಸಗಿ ಗ್ರಾಮದ ಚನ್ನಕುಮಾರ್ ರಾಥೋಡ್ ಇಲ್ಲಿಗೆ ಬಂದದ್ದ. ಅಂಬೇಡ್ಕರ್ ನಗರದ ಸರಸ್ವತಿಯನ್ನು ಪ್ರೀತಿಸಿದ್ದಾನೆ. ಚನ್ನಕುಮಾರ್ ಲಿಂಗಾಯತ ಕೋಮಿಗೆ ಸೇರಿದವನಾಗಿದ್ದು ಸರಸ್ವತಿ ದಲಿತ ಜನಾಂಗದವರಾಗಿದ್ದಾರೆ. ಇವರಿಬ್ಬರ ಮದುವೆಗೆ ಹುಡುಗನ ಮನೆಯವರು ವಿರೋಧ ವ್ಯಕ್ತಪಡಿಸಿದರಾದರೂ ವಿರೋಧವನ್ನು ಲೆಕ್ಕಿಸದೆ ಚನ್ನಕುಮಾರ್ ಸರಸ್ವತಿಯೊಂದಿಗೆ ಮದುವೆಯಾಗಿದ್ದಾನೆ.
ಮದುವೆಯಾದ ಬಳಿಕ ತಮ್ಮ ಸ್ವಗ್ರಾಮಹುಣಸಗಿಯಲ್ಲಿ ಕೆಲ ತಿಂಗಳು ವಾಸವಿದ್ದರಾದರೂ ಅಲ್ಲಿ ಹುಡುಗನ ಮನೆಯವರು ವರದಕ್ಷಿಣೆಗೆ ತೀವ್ರ ಹಿಂಸೆ ನೀಡುತ್ತಿದ್ದರಿಂದ ಮತ್ತೆ ಪತಿಯೊಂದಿಗೆ ಅಂಬೇಡ್ಕರ್ ನಗರಕ್ಕೆ ಬಂದು ವಾಸವಾಗಿದ್ದರು. ಆದರೆ ತಮ್ಮ ಕುಟುಂಬದವರ ಚಿತಾವಣೆಯಿಂದಾಗಿ ದಿನನಿತ್ಯ ವರದಕ್ಷಿಣೆಗಾಗಿ ಚನ್ನಕುಮಾರ್ ಹಿಂಸೆ ನೀಡುತ್ತಿದ್ದು ಇದೀಗ ವರದಕ್ಷಿಣೆ ನೀಡದಿದ್ದರೆ ನಾನು ಯಾವುದೇ ಕಾರಣಕ್ಕೂ ಮನೆಗೆ ಬರುವುದಿಲ್ಲ ಎಂದು ಹೊರಟು ಹೋಗಿರುವುದಾಗಿ ಸರಸ್ವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement