ವಿವಿಧೆಡೆ ಶನೇಶ್ವರಸ್ವಾಮಿ ಜಯಂತ್ಯುತ್ಸವ
ಮಾಗಡಿ: ಶನೇಶ್ವರಸ್ವಾಮಿ ಜಯಂತ್ಯುತ್ಸವ ಪ್ರಯುಕ್ತ ಶನಿವಾರ ಪಟ್ಟಣದ ಪ್ರಸಿದ್ಧ ಪುರಾತನವಾದ ಸೂರ್ಯಪುತ್ರ ಶನೇಶ್ವರಸ್ವಾಮಿ, ಗುರು ಶನೇಶ್ವರಸ್ವಾಮಿ, ಉಡುವೇಗೆರೆ ಶನೇಶ್ವರಸ್ವಾಮಿ ಸೇರಿದಂತೆ ತಾಲೂಕಿನ ವಿವಿಧೆಡೆ ಇರುವ ಬಹುತೇಕ ಶನೇಶ್ವರಸ್ವಾಮಿ ದೇವಾಲಯದಲ್ಲಿ ಬಹಳ ವಿಜೃಂಭಣೆಯಿಂದ ಕಾರ್ಯಕ್ರಮಗಳು ನೆರವೇರಿದವು. ಜಯಂತಿ ಅಂಗವಾಗಿ ದೇವರಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ಹೋಮ, ಹವನ ಮತ್ತು ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು. ಅಮಾವಾಸ್ಯೆ ಹಾಗೂ ಶನೇಶ್ವರಸ್ವಾಮಿ ಜಯಂತ್ಯುತ್ಸವಕ್ಕೆ ನೂರಾರು ಭಕ್ತರು ಭಾಗವಹಿಸಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಇದೇ ವೇಳೆ ಪ್ರಸಾದ ವಿನಿಯೋಗ ನಡೆಯಿತು. ಗುರುಶನೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ಹೋಮ, ಪೂಜಾ ಕೈಂಕರ್ಯದಲ್ಲಿ ಮಂಠೇಶ್ವರ ರೈಸ್ ಮಿಲ್ ಮಾಲೀಕ ಉಮಾಪತಿ, ಮಹೇಶ್, ಮೂರ್ತಿ, ಕೃಷ್ಣ, ರಾಜು, ನಾರಾಯಣಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.