ಶವಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ
ಚನ್ನಪಟ್ಟಣ: ಪೂಜಾ ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಶೂಶ್ರುಷಕಿ ಮಹೇಶ್ವರಿ ಶವಪರೀಕ್ಷೆಯನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಡಿಸದಂತೆ ಮೃತಳ ಪೋಷಕರು ಮತ್ತು ಕೆಲ ಸಂಘಟನೆಗಳು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಯುವತಿಯ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ ತಾಲೂಕಿನ ದಲಿತ ಮತ್ತು ಜನಪರ ಸಂಘಟನೆಯ ಮುಖಂಡರು ಈ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು, ತಪ್ಪಿತಸ್ಥರಾಗಿರುವ ಆಸ್ಪತ್ರೆ ಆಡಳಿತ ಮಂಡಲಿಯವರನ್ನು ಬಂಧಿಸಿ ವಿಚಾರಣೆ ಗೊಳಪಡಿಸ ಬೇಕೆಂದು ಪಟ್ಟುಹಿಡಿದರು. ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವವರೆಗೆ ಶವಪರೀಕ್ಷೆಗೆ ಅವಕಾಶ ನೀಡುವುದಿಲ್ಲ, ಪೊಲೀಸರಿಗೆ ತಿಳಿಯದಂತೆ ಶವವನ್ನು ಆಸ್ಪತ್ರೆಯಲ್ಲಿರಿಸಿಕೊಂಡಿರುವ ಸರ್ಕಾರಿ ಆಸ್ಪತ್ರೆ ವೈದ್ಯರ ಕ್ರಮ ಸಂದೇಹಾಸ್ಪದವಾಗಿದ್ದು ತಾಲೂಕಿನ ವೈದ್ಯರು ಯಾವುದೇ ಕಾರಣಕ್ಕೂ ಶವಪರೀಕ್ಷೆ ನಡೆಸ ಬಾರದೆಂದು ಪಟ್ಟು ಹಿಡಿದರು. ದಲಿತಪರ ಸಂಘಟನೆಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಅನುಪಮ್ ಅಗ್ರವಾಲ್ ಮೃತ ಯುವತಿಯ ಶವ ಪರಿಶೀಲಿಸಿದರಲ್ಲದೆ, ದಸಂಸ ಮುಖಂಡರ ಒತ್ತಾಯದಂತೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸುವಂತೆ ಸೂಚಿಸಿದರು.