ಸ್ವಾರ್ಥಕ್ಕಾಗಿ ಪರಿಸರ ನಾಶಪಡಿಸಬೇಡಿ: ಲಿಂಗಪ್ಪ
ಕ.ಪ್ರ.ವಾರ್ತೆ ರಾಮನಗರ ಜೂ.8
ಮನುಷ್ಯ ತನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಾರ್ಥಕ್ಕಾಗಿ ನಾಶಪಡಿಸದೆ ಸಂರಕ್ಷಿಸಬೇಕು ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಲಿಂಗಪ್ಪ ತಿಳಿಸಿದರು.
ನಗರದ ಎಂ.ಎಚ್. ಶಾಲೆಯಲ್ಲಿ ಕನ್ನಡ ಕಲ್ಪತರು ಸಂಘದಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲೆಗೊಂದು ವನ, ಮಗುವಿಗೊಂದು ಮರ ಎಂಬ ಗುರಿಯೊಂದಿಗೆ ಖಾಲಿ ಇರುವ ಜಾಗದಲ್ಲಿ ಸಸಿ ನೆಟ್ಟು, ಬೆಳೆಸಬೇಕು ಎಂದರು.
ಕೈಗಾರಿಕೀಕರಣದಿಂದಾಗಿ ಪರಿಸರ ನಾಶ ದಿನೇ ದಿನೇ ಹೆಚ್ಚಾಗುತ್ತಿದೆ. ಕಾರ್ಖಾನೆಗಳು ಹೊರಬಿಡುವ ತ್ಯಾಜ್ಯದಿಂದ ಜಲ, ವಾಯು ಮಾಲಿನ್ಯ ಉಂಟಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಸುತ್ತಮುತ್ತಲ ಪರಿಸರ ವಿಷಯುಕ್ತವಾಗಿ ಇಡೀ ಪ್ರಾಣಿ ಸಂಕುಲವೇ ವಿನಾಶವಾಗುವ ಆತಂಕ ಎದುರಾಗಿದೆ ಎಂದು ಹೇಳಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಅದರಲ್ಲೂ ವಿದ್ಯಾರ್ಥಿಗಳು ಪರಿಸರ ನಾಶದಿಂದ ಉಂಟಾಗಬಹುದಾದ ಅನಾಹುತಗಳನ್ನು ಇತರರಿಗೆ ತಿಳಿ ಹೇಳಬೇಕು. ಶಾಲಾ ಆವರಣ ಸೇರಿದಂತೆ ತಮ್ಮ ಸುತ್ತಮುತ್ತಲಿನ ಖಾಲಿ ಜಾಗಗಳಲ್ಲಿ ಸಸಿ ನೆಟ್ಟು ಪೋಷಿಸುವ ಮೂಲಕ ಪರಿಸರ ನಾಶವನ್ನು ತಡೆಗಟ್ಟಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು, ಮಕ್ಕಳಿಂದ ಪರಿಸರ ಜಾಗೃತಿ ಜಾಥಾ ನಡೆಸಲಾಯಿತು. ಪರಿಸರ ಸಂರಕ್ಷಣೆಯ ಅಗತ್ಯತೆ ಕುರಿತು ಕಿರುಚಿತ್ರ ತೋರಿಸಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿ ವೃಂದಕ್ಕೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಕಾರ್ಯಕ್ರಮದಲ್ಲಿ ಎಂ.ಎಚ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಚಂದ್ರಶೇಖರ್, ಪ್ರಾಂಶುಪಾಲ ಗುರುರಾಜ್, ಮುಖ್ಯ ಶಿಕ್ಷಕಿ ಅಂಬಿಕಾ ಮತ್ತಿತರರು ಹಾಜರಿದ್ದರು.