ಹೆದ್ದಾರಿ ಬದಿ ರಸ್ತೆಯೆಲ್ಲಾ ಬೋಳು!
ನೆಲಮಂಗಲ: ಹೆದ್ದಾರಿಗಳ ಅಭಿವೃದ್ಧಿಗೋಸ್ಕರ ರಸ್ತೆ ಬದಿಯಲ್ಲಿ ನೂರಾರು ವರ್ಷಗಳಿಂದ ಸೊಂಪಾಗಿ ಬೆಳೆದು ನಿಂತಿದ್ದ ವಿವಿಧ ಜಾತಿಯ ಮರಗಳು ಇಂದು ನಾಮಾವಶೇಷವಾಗಿ ಆ ಜಾಗದಲ್ಲಿ ಡಾಂಬರ್ ರಸ್ತೆಗಳು ತಲೆಯೆತ್ತಿವೆ. ಆದರೆ ಮರಗಳಿದ್ದ ಜಾಗದಲ್ಲಿ ಬೇರೆ ಗಿಡಗಳನ್ನು ರಸ್ತೆ ನಿರ್ವಹಣೆ ಮಾಡುತ್ತಿರುವ ಕಂಪನಿಗಳು ಮಾಡದಿರುವುದಕ್ಕೆ ಪರಿಸರ ಪ್ರೇಮಿಗಳು ಮತ್ತು ವಿದ್ಯಾರ್ಥಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿಯ ರಸ್ತೆಗಳನ್ನು ಅಭಿವೃದ್ಧಿಪಡಿಸುವಾಗ ರಸ್ತೆ ಬದಿಯಲ್ಲಿ ಮರಗಿಡಗಳನ್ನು ಕಡಿದು ರಸ್ತೆ ನಿರ್ಮಾಣ ಪೂರ್ಣಗೊಂಡ ಮೇಲೆ ಮತ್ತೆ ಸಸಿಗಳ ಬೆಳೆಸಬೇಕೆಂಬ ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ರಸ್ತೆ ನಿರ್ವಹಣೆಯನ್ನು ಮಾಡುತ್ತಿರುವ ಕಂಪನಿಗಳು ಸರ್ಕಾರದ ಆದೇಶವನ್ನು ನಿರ್ಲಕ್ಷಿಸಿದ್ದಾರೆ.
ನೆಲಮಂಗಲ ಮತ್ತು ತುಮಕೂರು ಹೊರಗಿನ 40 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 4ನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಹೆದ್ದಾರಿ 48 ಸಹ ಅಭಿವೃದ್ಧಿಪಡಿಸಿದ್ದು ಎರಡೂ ರಸ್ತೆಗಳ ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ನೀಡಿ ವಾಹನಗಳಿಂದ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಬರೀ ಹಣ ಮಾಡುವುದೆ ಇವರ ಮುಖ್ಯವಾಗಿಸಿಕೊಂಡು ಇತರೆ ಯಾವುದೇ ವಿಚಾರಕ್ಕೂ ಆದ್ಯತೆ ನೀಡುತ್ತಿಲ್ಲ. ರಾಷ್ಟ್ರೀಯ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿಲ್ಲ ಎಂಬುದು ವಾಹನ ಚಾಲಕರ ಆರೋಪ.
10 ವರ್ಷಗಳಿಂದ ಹೆದ್ದಾರಿಯಲ್ಲಿ ಚಲಿಸುವ ವಾಹನಗಳಿಂದ ಹಣ ವಸೂಲಿ ಮಾಡುವ ಕಾರ್ಯ ನಡೆಯುತ್ತಿದೆ. ವರ್ಷಕ್ಕೊಮ್ಮೆ ಅದರ ದರವನ್ನೂ ಸಹ ಹೆಚ್ಚಿಸುತ್ತಿದ್ದಾರೆ. ನೆಲಮಂಗಲ ಟೋಲ್ನಲ್ಲಿ ದಿನಮೊಂದಕ್ಕೆ ಅಂದಾಜು 10 ರಿಂದ 12 ಲಕ್ಷ ವಾಹನಗಳಿಂದ ಸಂಗ್ರಹವಾಗುತ್ತಿದೆ. ರಸ್ತೆ ನಿರ್ವಹಣೆಯನ್ನು ಸಹ ಸರಿಯಾದ ರೀತಿಯಲ್ಲಿ ಪಾಲಿಸುತ್ತಿಲ್ಲ. ಕೆಟ್ಟು ನಿಂತ ವಾಹನಗಳನ್ನು ತಕ್ಷಣದಲ್ಲೇ ತೆರವುಗೊಳಿಸುತ್ತಿಲ್ಲ. ರಸ್ತೆಯಲ್ಲಿ ತುಂಬಿರುವ ಮಣ್ಣು ಮತ್ತು ಮರಳನ್ನು ಸ್ವಚ್ಛಗೊಳಿಸುತ್ತಿಲ್ಲ. ವಾಹನಗಳು ಅಪಘಾತಕ್ಕೀಡಾದಾಗ ತುರ್ತು ಆ್ಯಂಬುಲೆನ್ಸ್ ವ್ಯವಸ್ಥೆ ನೀಡುತ್ತಿಲ್ಲ. ಆದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ.