ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನ್ನಡ ಶ್ರೀಮಂತ ಭಾಷೆ: ದೇಜಗೌ

Rashmi Kasaragodu
Updated On : 10 Jun 2013, 11:56 am

ಕ.ಪ್ರ.ವಾರ್ತೆ   ರಾಮನಗರ   ಜೂ. 9-
ಕನ್ನಡವು ಸಾಹಿತ್ಯಕವಾಗಿ ಶ್ರೀಮಂತ ಭಾಷೆಯಾಗಿದೆ. ಕನ್ನಡ ಸಾಹಿತ್ಯದಲ್ಲಿ ರಚನೆಯಾಗಿರುವಷ್ಟು ಮಹಾಗ್ರಂಥಗಳು ಪ್ರಪಂಚದ ಬೇರಾವ ಭಾಷೆಯಲ್ಲೂ ರಚನೆಯಾಗಿಲ್ಲ ಎಂದು ನಾಡೋಜ ದೇ.ಜವರೇಗೌಡ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಾಹಿತ್ಯ ಸಂಗಮ ಟ್ರಸ್ಟ್‌ನಿಂದ ಭಾನುವಾರ ನಡೆದ ಜಿಲ್ಲಾ ಸಾಹಿತಿಗಳ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಂಗ್ಲ ಭಾಷೆಯಲ್ಲಿ ಕೇವಲ 3-4 ಮಹಾಗ್ರಂಥಗಳಿವೆ. ಆದರೆ ಕನ್ನಡ ಭಾಷೆಯಲ್ಲಿ ನೂರಾರು ಮಹಾಗ್ರಂಥಗಳು ರಚನೆಯಾಗಿವೆ. ಇಂದಿಗೂ ಕೂಡ ರಚನೆಯಾಗುತ್ತಿವೆ ಎಂದರು.
ಕನ್ನಡದಲ್ಲಿ ರಚಿತವಾಗಿರುವ ವಚನ ಸಾಹಿತ್ಯ, ಕೀರ್ತನಾ ಸಾಹಿತ್ಯಕ್ಕೆ ಸರಿಸಾಟಿಯಾದ ಮತ್ತೊಂದು ಗ್ರಂಥ  ಬೇರಾವ ಭಾಷೆಯಲ್ಲೂ ಇಲ್ಲ. ಇಂತಹ ಶ್ರೇಷ್ಠ ಭಾಷೆಯನ್ನು ಕಡೆಗಣಿಸಬಾರದು. ಆಳವಾಗಿ ಅಭ್ಯಸಿಸಿ ಪಾಂಡಿತ್ಯವನ್ನು ಹೊಂದಬೇಕು. ಆಂಗ್ಲ ಭಾಷೆಯ ವ್ಯಾಮೋಹವನ್ನು ಬಿಡಬೇಕು ಎಂದು ಸಲಹೆ ನೀಡಿದರು.
ಸಾಹಿತ್ಯ ನಿಂತ ನೀರಾಗಬಾರದು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸಾಹಿತಿಗಳು ಸಾಹಿತ್ಯ ರಚಿಸಬೇಕು. ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಿ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಾಹಿತಿಗಳು ಸಾಹಿತ್ಯವನ್ನು ರಚಿಸಬೇಕು ಎಂದು ದೇಜಗೌ ಕರೆ ನೀಡಿದರು.

ಪ್ರತಿಬಿಂಬ: ಸಾಹಿತ್ಯವೆಂಬುದು ಮನುಷ್ಯನ ಜೀವನದ ಪ್ರತಿಬಿಂಬವಾಗಿದೆ. ಸಮಾಜದಲ್ಲಿ ನಡೆಯುವ ಎಲ್ಲಾ ಘಟನಾವಳಿಗಳನ್ನು ಮತ್ತು ಲೋಪದೋಷಗಳನ್ನು ಸಾಹಿತ್ಯ ಕೃತಿಗಳಲ್ಲಿ ಕಾಣಬಹುದಾಗಿದೆ. ಆದ್ದರಿಂದ ಸಾಹಿತಿಗಳು ಸಾಮಾಜಿಕ ಬದ್ಧತೆಯನ್ನು ತಮ್ಮ ಬರವಣಿಗೆಯಲ್ಲಿ ಅಳವಡಿಸಿಕೊಂಡು ಸಾಹಿತ್ಯವನ್ನು ರಚಿಸಿದಾಗ ಸಮಸಮಾಜವನ್ನು ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಇಂದು ಮೌಲ್ಯಯುತ ಸಾಹಿತ್ಯ ಕೃತಿಗಳು ರಚನೆಯಾಗುತ್ತಿಲ್ಲ. ಇದರಿಂದ ಸಮಾಜ ದಿಕ್ಕು ತಪ್ಪುತ್ತಿದೆ. ತಮ್ಮನ್ನು ಸಾಕಿ ಸಲುಹಿದ ಪೋಷಕರನ್ನು ಮಕ್ಕಳೇ ಸರಪಳಿ ಹಾಕಿ ಕೂಡಿ ಹಾಕುವ ಅಮಾನವೀಯ ಘಟನೆಗಳು ಸಮಾಜದಲ್ಲಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸಾಹಿತಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಾಹಿತ್ಯ ರಚಿಸಬೇಕಿದೆ ಎಂದರು.

ಮಾಹಿತಿ ಎಂಬ ಗ್ರಂಥ ಬಿಡುಗಡೆ: ಎಷ್ಟು ಸಾಹಿತಿಗಳಿದ್ದಾರೆ ಎಂಬುದು ಮುಖ್ಯವಲ್ಲ. ಎಷ್ಟು ಸಾಹಿತಿಗಳು ಯಾವ ರೀತಿಯ ಕೃತಿಗಳನ್ನು ರಚಿಸಿದ್ದಾರೆ ಎಂಬುದು ಮುಖ್ಯವಾಗುತ್ತದೆ. ನಾಮಕಾವಸ್ಥೆ ಸಾಹಿತಿಗಳಿಂದ ಸಮಾಜಕ್ಕೆ ಯಾವ ರೀತಿಯ ಕೊಡುಗೆಗಳೂ ಇರುವುದಿಲ್ಲ ಎಂದು ರಾಮನಗರ ಜಿಲ್ಲೆಯ ಸಾಹಿತಿಗಳ ಮಾಹಿತಿ ಎಂಬ ಗ್ರಂಥವನ್ನು ಬಿಡುಗಡೆಗೊಳಿಸಿದ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದರು.
ಸಾಹಿತಿಗಳನ್ನು ಅರಮನೆ, ಗುರುಮನೆ ಹಾಗೂ ಸೆರೆಮನೆ ಕವಿಗಳೆಂದು ವಿಂಗಡಿಸಬಹುದು. ಧನಿ ಇಲ್ಲದವರಿಗೆ ಧನಿಯಾಗುವಂತಹ ಹಾಗೂ ಸಮಾಜದ ಅಂಕು-ಡೊಂಕುಗಳನ್ನು ನೇರವಾಗಿ ತಮ್ಮ ಕೃತಿಗಳಲ್ಲಿ ಚಿತ್ರಿಸುವಂತಹ ಸಾಹಿತಿಗಳು ಸೆರೆಮನೆಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದರು.  ಅಧ್ಯಕ್ಷತೆ ವಹಿಸಿದ್ದ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಮರಿದೇವರು,  ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಾನಂದೂರು ಕೆಂಪಯ್ಯ, ಪಾನ್ಯಂ ನಟರಾಜ್, ಸಾಹಿತ್ಯ ಸಂಗಮ ಟ್ರಸ್ಟ್‌ನ ಅಧ್ಯಕ್ಷ ಎಸ್. ನಾಗಭೂಷಣ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement