ಮಹೇಶ್ವರಿ ಕೊಲೆ ಆರೋಪಿಗಳನ್ನು ಶೀಘ್ರ ಬಂಧಿಸಲು ಆಗ್ರಹಿಸಿ ಪ್ರತಿಭಟನೆ
ರಾಮನಗರ: ಚನ್ನಪಟ್ಟಣದ ಪೂಜಾ ನರ್ಸಿಂಗ್ ಹೋಂನಲ್ಲಿ ಶುಶ್ರೂಷಕಿಯಾಗಿದ್ದ ಮಹೇಶ್ವರಿ ಅವರ ಸಾವು ಆತ್ಮಹತ್ಯೆಯಿಂದಾದುದಲ್ಲ. ಇವರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ. ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಶವದ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಮೃತಳ ಸಂಬಂಧಿಕರು ಮತ್ತು ದಲಿತಪರ ಸಂಘಟನೆಗಳಿಂದ ಭಾನುವಾರ ಧರಣಿ ನಡೆಯಿತು. ಪ್ರತಿಭಟನಾನಿರತರೊಂದಿಗೆ ಮಾತನಾಡಿದ ಎಸ್‌ಪಿ ಅನುಪಮ್ ಅಗ್ರವಾಲ್ ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ಬಗ್ಗೆ ಸಂಬಂಧಿಕರು ಸಂದೇಹ ವ್ಯಕ್ತಪಡಿಸಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವಪರೀಕ್ಷೆ ಮಾಡಿಸಲಾಗಿದೆ. ವರದಿ ಬಂದ ನಂತರ ಪರಿಶೀಲನೆ ನಡೆಸಿ, ಒಂದು ವೇಳೆ ಅತ್ಯಾಚಾರ ನಡೆದಿರುವುದು ಕಂಡು ಬಂದರೆ ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂದರು. ಇದಕ್ಕೊಪ್ಪದ ಪ್ರತಿಭಟನಾನಿರತರು ಘಟನೆಗೆ ಸಂಬಂದಪಟ್ಟ ನರ್ಸಿಂಗ್ ಹೋಂ ಮಾಲೀಕರನ್ನು ಬಂಧಿಸದಿದ್ದಲ್ಲಿ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ದಲಿತ ಮುಖಂಡರಾದ ರಾ.ಶಿ.ದೇವರಾಜ್, ಚಕ್ಕಲೂರು ಚೌಡಯ್ಯ, ಗೋವಿಂದರಾಜು, ಕುಮಾರ್, ಶಿವಾನಂದ, ಹರೀಶ್, ಅನಿಲ್, ಜೋಗಿಂದರ್ ಇದ್ದರು.