'ಮಾಲಿನ್ಯರಹಿತ ಕೈಗಾರಿಕೆಗೆ ಆದ್ಯತೆ'
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶವನ್ನು ಮಾಲಿನ್ಯರಹಿತ ಕೈಗಾರಿಕಾ ವಲಯವಾಗಿ ನಿರ್ಮಿಸುವ ಚಿಂತನೆ ನಡೆಯುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.
ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಇಎಸ್‌ಐ ಆಸ್ಪತ್ರೆ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಪೆಟ್ರೋಲಿಯಂ ಮಂತ್ರಾಲಯದಿಂದ ಶೀಘ್ರವೇ ಯಲಹಂಕ ಸಮೀಪ ಗ್ಯಾಸ್ ಮತ್ತು ಡೀಸೆಲ್ ಸಂಸ್ಕರಣಾ ಘಟಕಗಳನ್ನು ಮಾಡುವ ಉದ್ದೇಶವಿದ್ದು, ಈ ಕೈಗಾರಿಕಾ ಪ್ರದೇಶಕ್ಕೆ ಪೈಪ್‌ಲೈನ್ ಮೂಲಕ ಇಂಧನ ಪೂರೈಕೆ ಮಾಡಲಾಗುವುದು. ಈ ಮೂಲಕ ಇಲ್ಲಿ ಮತ್ತಷ್ಟು ಕೈಗಾರಿಕೆಗಳು ವಿಸ್ತರಣೆಗೊಳ್ಳಲಿವೆ ಎಂದ ಅವರು, ಮೂಲಸೌಕರ್ಯಗಳು ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಆದ್ಯತೆ ನೀಡಬೇಕಿದೆ. ಎತ್ತಿನಹೊಳೆ ಯೋಜನೆ ಶೀಘ್ರ ಆರಂಭವಾಗಲಿದೆ. ಅದೇ ರೀತಿ ಡಾ.ಪರಮಶಿವಯ್ಯ ವರದಿಯಂತೆ ಬಯಲುಸೀಮೆಗೆ ಶಾಶ್ವತ ನೀರಾವರಿ ಕಲ್ಪಿಸುವ ಯೋಜನೆ ಅನುಷ್ಠಾನಕ್ಕೂ ಸರ್ಕಾರ ಪ್ರಯತ್ನಿಸಬೇಕು. ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಗೆ ಸ್ಪಂದನೆ ಬೇಕಿದೆ ಎಂದರು.
ತೀವ್ರ ಸಮಸ್ಯೆ: ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ಜೊತೆಗೆ ರಸ್ತೆಗಳ ಸ್ಥಿತಿ ತೀರಾ ಶೋಚನೀಯವಾಗಿದೆ. ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಟೆಕ್ಸ್‌ಟೈಲ್ ಪಾರ್ಕ್ ಹಲವು ಸಮಸ್ಯೆಗಳಿಂದ ನರಳುತ್ತಿದೆ. ತ್ಯಾಜ್ಯ ಶುದ್ಧೀಕರಣ ಘಟಕಗಳು ಸ್ಥಗಿತಗೊಂಡಿವೆ. ಈ ಬಗೆಯ ಸಮಸ್ಯೆಗಳ ನಿವಾರಣೆಗೆ ರಾಜ್ಯ ಸರ್ಕಾರ ತುರ್ತು ಗಮನ ಹರಿಸಬೇಕು. ಸಿಎಂ ನಿಧಿಯಿಂದ ವಿಶೇಷಾನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಸಿಎಂ ಸಿದ್ಧರಾಮಯ್ಯ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಚಿವ ಕೃಷ್ಣಭೈರೇಗೌಡ, ಪರಮೇಶ್ವರನಾಯಕ್, ಮಾಜಿ ಶಾಸಕ ಆರ್.ಜಿ. ವೆಂಕಟಾಚಲಯ್ಯ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 5 ಲಕ್ಷ ಸಹಾಯ: ಆರೋಗ್ಯದ ತೀವ್ರ ಸಮಸ್ಯೆ ಎದುರಿಸುತ್ತಿರುವ ಬಾಲಕಿ ಪುಟ್ಟಯ್ಯನ ಅಗ್ರಹಾರದ ಆರ್. ಅಶ್ವಿನಿಗೆ ಭಾರತ್ ಪೆಟ್ರೋಲಿಯಂ ವತಿಯಿಂದ 5 ಲಕ್ಷದ ಸಹಾಯಧನದ ಚೆಕ್ ಅನ್ನು ವಿತರಿಸಲಾಯಿತು.