ರಾಮೇಶ್ವರಸ್ವಾಮಿ ದೇವಾಲಯ ಯಥಾಸ್ಥಿತಿಗೆ ಆಗ್ರಹ
ಮಾಗಡಿ: ಚಾರಿತ್ರಿಕ ಕೋಟೆ ಶ್ರೀರಾಮೇಶ್ವರಸ್ವಾಮಿ ದೇವಾಲಯ ಯಥಾಸ್ಥಿತಿ ಕಾಪಾಡುವಂತೆ ಸ್ಮಾರಕ ಹಿತ ರಕ್ಷಣಾ ಸಮಿತಿ ಸಂಚಾಲಕ ಮಾರಣ್ಣ ಆಗ್ರಹಿಸಿದ್ದಾರೆ.
ಮಾಗಡಿಯ ಕೆಂಪೇಗೌಡರ ಐತಿಹಾಸಿಕ ಕೋಟೆ ಮೈದಾನದಲ್ಲಿ ಇರುವ ಚಾರಿತ್ರಿಕ ಶ್ರೀ ಕೋಟೆ ರಾಮೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಅಂದಾಜು 1 ಕೋಟಿ ಮಂಜೂರಾಗಿದೆ.
ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಈ ದೇವಾಲಯ ಸುಂದರವಾದ ವಿಗ್ರಹಗಳು, ಕಲಾ ಶಿಲ್ಪಗಳಿಗೆ ದಕ್ಕೆಯಾಗದಂತೆ ರಕ್ಷಿಸಬೇಕು. ಪ್ರಕಾರದಲ್ಲಿದ್ದ ಪಾರ್ವತಿ ಅಮ್ಮನವರು, ಶ್ರೀವರಸಿದ್ದಿವಿನಾಯಕ ಸ್ವಾಮಿ, ಲಿಂಗಗಳು, ನಂದಿ ವಿಗ್ರಹಗಳು, ಗಂಗೆ, ಗೌರಿ ವಿಗ್ರಹಗಳು ಸೇರಿದಂತೆ ಇತರೆ ಅನೇಕ ಚಾರಿತ್ರಿಕ ವಿಗ್ರಹಗಳನ್ನು ತಂಡು ಹಳೇ ಸೀರೆಯಿಂದ ಸುತ್ತಿಟ್ಟು, ಕಸದ ರಾಶಿಯಂತೆ ಗೋಡೆಯೊಂದರ ಮೂಲೆಯಲ್ಲಿ ಸೇರಿಸಲಾಗಿದೆ.
ವಿಗ್ರಹಗಳಿಗೆ ಯಾವುದೇ ರಕ್ಷಣೆಯಿಲ್ಲ. ದೇಗುಲದ ಬಾಗಿಲಿಗೆ ಬೀಗ ಹಾಕಿಲ್ಲ. ಬಹುತೇಕ ಚಾರಿತ್ರಿಕ ವಿಗ್ರಹಗಳು ಭಗ್ನಗೊಂಡಂಥ ಸ್ಥಿತಿಯಲ್ಲಿದೆ. ಕೂಡಲೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಿಗ್ರಹಗಳ ರಕ್ಷಣೆಗೆ ಅಗತ್ಯ ಕ್ರಮ ವಹಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.