ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಹರ್ಷ
ನೆಲಮಂಗಲ: ಗೋವಾದಲ್ಲಿ ನಡೆದ ಬಿ.ಜೆ.ಪಿ ಕಾರ್ಯಕಾರಿಣಿ ಸಭೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಸಲುವಾಗಿ ಚುನಾವಣೆ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಆಯ್ಕೆ ಮಾಡಿರುವುದನ್ನು ತಾಲೂಕು ಬಿ.ಜೆ.ಪಿ ಘಟಕ ಸ್ವಾಗತಿಸಿದೆ.
ತಾಲೂಕು ಕಚೇರಿ ಮುಂದೆ ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚುವ ಮೂಲಕ ಬಿ.ಜೆ.ಪಿ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು. ಜೆಪಿ ತಾಲೂಕು ಅಧ್ಯಕ್ಷ ಸುಬ್ಬರಾಮಯ್ಯ ಮಾತನಾಡುತ್ತಾ ನರೇಂದ್ರ ಮೋದಿಯವರಿಗೆ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ಶಕ್ತಿ ಇದೆ ಮತ್ತು ದೇಶದ ಭವಿಷ್ಯಕ್ಕೆ ಇಂದು ಮೋದಿಯಂತಹ ನಾಯಕರ ಅವಶ್ಯಕತೆ ಇದೆ. ಯುವ ಶಕ್ತಿ ಮೋದಿಯವರಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಬಾಳೆಕಾಯಿ ನಾಗರಾಜು, ಜಿಲ್ಲಾ ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜಮ್ಮ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.