ಮೋದಿ ನೇತೃತ್ವದಲ್ಲಿ ಬಿಜೆಪಿಗೆ ಅಧಿಕಾರ ನಿಶ್ಚಿತ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜೂ.10
ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ಧಾರ ಸ್ವಾಗತಾರ್ಹ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೇಳಿದರು.
ನರೇಂದ್ರ ಮೋದಿಗೆ ಹೊಸ ಜವಾಬ್ದಾರಿ ನೀಡಿರುವ ಹಿನ್ನಲೆಯಲ್ಲಿ ಇಲ್ಲಿನ ತಾಲೂಕು ಮತ್ತು ನಗರ ಬಿಜೆಪಿ ಘಟಕಗಳ ನೇತೃತ್ವದಲ್ಲಿ ಸೋಮವಾರ ಸಿದ್ಧಲಿಂಗಯ್ಯ ವೃತ್ತದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೋದಿ ಪ್ರಭಾವಿ ನಾಯಕನಾಗಿ ಗುರ್ತಿಸಿಕೊಳ್ಳುತ್ತಿದ್ದು, ಭವಿಷ್ಯದ ಪ್ರಧಾನಿ ಎಂದೇ ಬಿಂಬಿತರಾಗುತ್ತಿದ್ದಾರೆ. ಜೊತೆಗೆ ಸಮಾಜದ ಎಲ್ಲ ಹಂತಗಳ ಜನರ ಬೆಂಬಲವೂ ಅವರಿಗೆ ಲಭ್ಯವಾಗುವ ನಿರೀಕ್ಷೆ ಇದೆ. ಮಾದರಿ ರಾಜ್ಯವನ್ನಾಗಿ ಗುಜರಾತ್ ಅನ್ನು ಪರಿವರ್ತಿಸಿದ ಕೀರ್ತಿ ಹೊತ್ತ ಮೋದಿ ಸತತ 3ನೇ ಬಾರಿ ಅಲ್ಲಿನ ಸಿಎಂ ಆಗಿ ಜನಪರವಾಗಿದ್ದಾರೆ.
ಈ ಹಂತದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಕೈಗೊಂಡಿರುವ ನಿರ್ಧಾರ ಗಣನೀಯವಾಗಿದೆ. ಮೋದಿ ಪ್ರಭಾವದಿಂದ ಲೋಕಸಭೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ಜಿಲ್ಲಾ ಮುಖಂಡ ಕೆ.ಮೋಹನ್ಕುಮಾರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪುಷ್ಪಾ ಶಿವಶಂಕರ್, ನಗರ ಅಧ್ಯಕ್ಷ ಗೋಪಿ, ತಾಲೂಕು ಕಾರ್ಯದರ್ಶಿ ನಾಗರಾಜ್, ಮುಖಂಡರಾದ ಟಿ.ಜಿ.ಮಂಜುನಾಥ್, ಉಮಾಮಹೇಶ್ವರಿ, ಆವಲಕೊಂಡಪ್ಪ, ಸದಾಶಿವು, ಮಹದೇವಯ್ಯ, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.