ಅತ್ಯಾಧುನಿಕ ನೀರು ಕಾಯಿಸುವ ಯಂತ್ರದ ಶೋಧ
ದೊಡ್ಡಬಳ್ಳಾಪುರ: ಈ ಯಂತ್ರ ಸೋಲಾರ್‌ನ ರೀತಿ ಮಳೆ ಬಂದರೆ ಮೂಲೆ ಗುಂಪಾಗುವುದಿಲ್ಲ. ಕರೆಂಟ್ ಕೈಕೊಟ್ಟರೆ ಹೇಗೆ ಎಂದು ಚಿಂತಿಸಬೇಕಾಗಿಲ್ಲ. ಅಡುಗೆ ಅನಿಲ ಖಾಲಿಯಾದರೂ ಯೋಚನೆಯಿಲ್ಲ. ಯಾವಾಗ ಬೇಕಾದರೂ ಬಿಸಿಬಿಸಿ ನೀರಿನಲ್ಲಿ ಸ್ನಾನ ಮಾಡುವ ಅವಕಾಶ ಈ ಯಂತ್ರವನ್ನು ಬಳಸಿಕೊಂಡವರಿಗೆ ಲಭ್ಯ.
ಇದು ವರ್ಷದ ಎಲ್ಲ ಹವಾಗುಣದಲ್ಲೂ ಒಂದೇ ರೀತಿ ಕಾರ್ಯನಿರ್ವಹಿಸುತ್ತದೆ. ಇದರ ಹೆಸರು ಹೈಬ್ರಿಡ್ ವಾಟರ್ ಹೀಟಿಂಗ್ ಸಿಸ್ಟಮ್. ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ವಿದ್ಯಾಲಯದ ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳು ಇದನ್ನು ಸಂಶೋಧಿಸಿದ್ದಾರೆ.
ಅಂದಹಾಗೆ ಇದು ಬಹು ಇಂಧನ ಬಳಕೆ ಹೊಂದಿರುವ ವಿಶಿಷ್ಟ ಯಂತ್ರ. ಸೌರಶಕ್ತಿ, ಎಲ್‌ಪಿಜಿ ಮತ್ತು ವಿದ್ಯುತ್ ಸಂಪರ್ಕಗಳಿಂದ ಇದು ಕಾರ್ಯನಿರ್ವಹಿಸುತ್ತದೆ. ಬಿಸಿಲಿದ್ದಾಗ ಸೌರಶಕ್ತಿ ಬಳಕೆಯಿಂದ ಇದು ಕಾರ್ಯನಿರ್ವಹಿಸಿದರೆ, ಮಳೆಗಾಲದಲ್ಲಿ ಎಲ್‌ಪಿಜಿ ಅಥವಾ ವಿದ್ಯಾತ್‌ನಿಂದ ಕೆಲಸ ನಿರ್ವಹಿಸುತ್ತದೆ. ವಿದ್ಯುತ್ ಕಡಿತಗೊಂಡರೆ ಏನು... ಎಂಬ ಭಯವೂ ಇಲ್ಲ. ಎಲ್‌ಪಿಜಿ ಬೆಲೆ ಏರಿಕೆಯ ಬಿಸಿಯೂ ಜನರಿಗೆ ತಟ್ಟಲ್ಲ. ಹೀಗಾಗಿ ಇದು ಜನಸ್ನೇಹಿ ಮತ್ತು ಮಾಲಿನ್ಯ ರಹಿತ ಎಂದು ವಿವರಿಸುತ್ತಾರೆ ಇದನ್ನು ಸಂಶೋಧಿಸಿರುವ ವಿದ್ಯಾರ್ಥಿಗಳು. ಮೆಕಾನಿಕಲ್ ವಿಭಾಗದ ಅಧ್ಯಾಪಕ ಬಸವರಾಜ ಎಚ್.ತಾಳಿಕೋಟೆ ಮಾರ್ಗದರ್ಶನದಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಪಿ.ಟಿ.ಬಾಲಾಜಿ, ಕೆ.ಎಚ್.ಧನುಷ್, ಎಲ್.ಬಿ.ಹರ್ಷ, ಜೆ.ಸಂಜಯ್ ಈ ಶೋಧನೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಸೌರಶಕ್ತಿ ಸಾಧನ: ಇದೇ ರೀತಿ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಚಾಲಿತ ಸೌರಶಕ್ತಿ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ವಿದ್ಯುಚ್ಛಕ್ತಿ ಕೊರತೆಯಿಂದ ಇದು ಮುಕ್ತಿ ಕೊಡುತ್ತದೆ. ಇದೊಂದು ಸ್ವಯಂಚಾಲಿತ ಸಾಧನ. ಸೂರ್ಯನ ಪಥವನ್ನು ಆಧರಿಸಿ ತನ್ನ ಕೋನವನ್ನು ಎರಡು ವಿಧಗಳಲ್ಲಿ ಬದಲಿಸುತ್ತದೆ. ಸೋಲಾರ್ ಪ್ಯಾನಲ್ ಮೇಲೆ ಬೀಳುವ ಎಲ್ಲ ಸೌರಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸಬಹುದು. ವರ್ಷದಲ್ಲಿ ಬರೋಬ್ಬರಿ 300 ದಿನಗಳಲ್ಲಿ ಸೂರ್ಯಶಕ್ತಿಯನ್ನು, 60 ದಿನಗಳಲ್ಲಿ ಅಲ್ಪಪ್ರಮಾಣದ ಸೂರ್ಯಶಕ್ತಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ.
ಇದನ್ನು ಅಧ್ಯಾಪಕ ರಾಘವೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಎಂ.ಕಾರ್ತಿಕ್, ಕೆ.ಸಿ.ಕೆಂಪೇಗೌಡ, ಎಂ.ಗಂಗಾಧರ, ಎನ್.ತಿರುಮಲಸ್ವಾಮಿ ಅಭಿವೃದ್ಧಿಪಡಿಸಿದ್ದಾರೆ.
ಮತ್ತೊಂದು ಮಹತ್ವದ ಶೋಧನೆಯಲ್ಲಿ ಡಿಸೈನ್ ಅಂಡ್ ಡೆವಲಪ್‌ಮೆಂಟ್ ಆಫ್ ಆಟೋಮ್ಯಾಟಿಕ್ ಪೇಜ್ ಟರ್ನರ್ ಯಂತ್ರವನ್ನು ಶೋಧಿಸಿದ್ದಾರೆ. ಸಹಪ್ರಾಧ್ಯಾಪಕ ಪಿ.ಎಂ.ವಿಜಯ ಪ್ರವೀಣ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಹೇಯತ್ ರೋಷನ್, ಮಹ್ಮದ್ ಹಸೀಯನ್ ಅಫ್ಜಲ್, ನವೀನ್ ತಂಪಿ ಮತ್ತು ರಫ್ಷಾಜ್ ಈ ಯಂತ್ರವನ್ನು ಶೋಧಿಸಿದ್ದಾರೆ. ಈ ಎಲ್ಲವೂ ಕಡಿಮೆ ದರದಲ್ಲಿ ಸಾರ್ವಜನಿಕರ ಕೈಗೆಟಕುವ ರೀತಿಯಲ್ಲಿ ಯೋಜಿಸಿ ತಯಾರಿಸಲಾಗಿದೆ. ಈ ತಂತ್ರಜ್ಞಾನವನ್ನು ಅನ್ವಯ ಮಾಡಿಕೊಂಡರೆ ಇಂಧನ ಸಮಸ್ಯೆ ಬಗೆಹರಿಸುವ ಮಹತ್ವದ ಕಾರ್ಯ ನಡೆಸಿದಂತಾಗುತ್ತದೆ ಎನ್ನುವುದು ವಿದ್ಯಾರ್ಥಿಗಳ ವಾದ.
ಕಾಲೇಜಿನ ಆಡಳಿತ ಮಂಡಲಿ ನಿರ್ದೇಶಕ ಜೆ.ರಾಜೇಂದ್ರ, ಸಿಇಓ ಗಂಗಾಧರಪ್ಪ, ಪ್ರಾಂಶುಪಾಲ ಡಾ.ಸುಂದರಂ, ಜೆ.ನಾಗೇಂದ್ರಸ್ವಾಮಿ ಮತ್ತಿತರರು ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.