ಒತ್ತುವರಿಯಲ್ಲಿ ದೇಗುಲ: 'ಹೈ' ನೋಟಿಸ್
ಬೆಂಗಳೂರು: ಹೊಸಕೋಟೆಯ ಕೊರ್ತಿ ಗ್ರಾಮದಲ್ಲಿನ ಪುರಾತನ ಕೆರೆಯನ್ನು ಒತ್ತುವರಿ ಮಾಡಿಕೊಂಡು ದೇವಸ್ಥಾನ ನಿರ್ಮಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಚಂದಪ್ಪ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಡಿ.ಎಚ್. ವಘೇಲ ಹಾಗೂ ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ವಿವಾದಿತ ಸ್ಥಳದಲ್ಲಿ ಯಾವುದೇ ಕಾಮಗಾರಿ ಮುಂದುವರಿಸದಂತೆ ಆದೇಶಿಸಿದೆ. ಅಲ್ಲದೆ, ಹೊಸಕೋಟೆ ತಹಶೀಲ್ದಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ಕೊರ್ಟಿ ಗ್ರಾಮದ ಸರ್ವೆ ಸಂಖ್ಯೆ 71ರ 8 ಗುಂಟೆ ಪ್ರದೇಶದಲ್ಲಿ ಅತಿ ಪುರಾತನ ಕೆರೆಯೊಂದಿದ್ದು, ಗ್ರಾಮದ ಜನ ಹಾಗೂ ಗೋವುಗಳಿಗೆ ಕುಡಿಯುವ ನೀರಿನ ಆಸರೆಯಾಗಿದೆ. ಆದರೆ, ರಾಮಪ್ಪ ಎಂಬುವರು ಅದನ್ನು ಒತ್ತುವರಿ ಮಾಡಿಕೊಂಡು ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ಕಾಮಗಾರಿ ಆರಂಭಿಸಿದ್ದು, ಈ ಸಂಬಂಧ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.