ಕುಡಿವ ನೀರಿಗೆ ಅಭಾವ: ಅಧಿಕಾರಿಗಳಿಂದ ನಿರ್ಲಕ್ಷ್ಯ- ಆರೋಪ
ನೆಲಮಂಗಲ: ತಾಲೂಕಿನ ನಿಡವಂದ ಗ್ರಾಮದಲ್ಲಿ ಕಳೆದ 15 ದಿನಗಳಿಂದಲೂ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದ್ದರೂ ಗ್ರಾಮದಲ್ಲಿನ ಪಂಚಾಯ್ತಿ ಸದಸ್ಯರಾಗಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಲಿ ಇತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಗ್ರಾಮಕ್ಕೆ ಸರಬರಾಜು ಆಗುತ್ತಿರುವ ನೀರಿನ ಕೊಳವೆ ಬಾವಿಗೆ ವಿದ್ಯುತ್ ಸರಬರಾಜು ಮಾಡುವ ಟಿ.ಸಿ (ಟ್ರಾನ್ಸ್‌ಫಾರ್ಮರ್) ಸುಟ್ಟು ಹೋಗಿರುವುದರಿಂದ ಸಮಸ್ಯೆ ಉಂಟಾಗಿದೆ. ಈ ಕೊಳವೆ ಬಾವಿಗೆ ಅವಶ್ಯಕತೆಯಿರುವಷ್ಟು ವಿದ್ಯುತ್ ಅನ್ನು ಬೇರೆಡೆಯಿಂದ ಪೂರೈಕೆ ಮಾಡಲು ಯಾರೂ ಮುಂದಾಗಿಲ್ಲ ಮತ್ತು ಸುಟ್ಟು ಹೋಗಿರುವ ಟ್ರಾನ್ಸ್‌ಫಾರ್ಮರ್ ಬದಲಿಸಲು ಸಹ ಮುಂದಾಗದೆ ಮೀನಾ ಮೇಷ ಎಣಿಸುತ್ತಿದ್ದಾರೆ. ಎಂದು ಆರೋಪಿಸಿದ್ದಾರೆ. ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷದಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಗ್ರಾಮಸ್ಥರ ಮೊಬೈಲ್ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ತೀರ್ಥಪ್ರಸಾದ್ ಪ್ರತಿಕ್ರಿಯಿಸಿ, ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.