ದರೋಡೆಗೆ ಹೊಂಚು: ನಾಲ್ವರ ಬಂಧನ
ಆನೇಕಲ್ಲು: ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ನಾಲ್ವರು ಕುಖ್ಯಾತ ದರೋಡೆಕೋರರನ್ನು ಜೀವದ ಹಂಗು ತೊರೆದು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಬೇಗೂರು ಠಾಣಾ ವ್ಯಾಪ್ತಿಯ ಕಾಳೇನ ಅಗ್ರಹಾರದ ನಂದೀಶ ಅ. ಗಣಿ, ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಹೆನ್ನಾಗರದ ಅಂತೋಣಿ ರಾಜ್ ಅ. ರಾಜಾ, ಹಾಗೂ ಹೆಬ್ಬಗೋಡಿಯ ಶಿವ ಅ. ಶಿವರಾಜ ಅ. ದೊಂಗ, ಜಿಗಣಿ ಠಾಣಾ ವ್ಯಾಪ್ತಿಯ ಮಾರಗೊಂಡನಹಳ್ಳಿಯ ಮೃತ್ಯುಂಜಯ ಅ, ಮುತ್ತು ಬಂಧಿತರು. ಇವರು ಚಂದಾಪುರ-ಹೀಲಲಿಗೆ ರೇಲ್ವೆ ಟ್ರಾಕ್ ಅನ್ನು ಕಾರ್ಯಾಸ್ಥಾನವಾಗಿಸಿಕೊಂಡು ರಾತ್ರಿ ವೇಳೆ ದರೋಡೆ ಮಾಡುತ್ತಿದ್ದರು. ಭಾನುವಾರ ರಾತ್ರಿ ಲಾರಿಯೊಂದನ್ನು ತಡೆದ ಇವರು ಮಚ್ಚು ಹಾಗೂ ಲಾಂಗ್ ತೋರಿಸಿ ಚಾಲಕನ ಬಳಿ ಇದ್ದ ರು. 3000 ನಗದು ಹಾಗೂ ಮೊಬೈಲ್ ದರೋಡೆ ಮಾಡಿದ್ದರು. ಖಚಿತ ಸುಳಿವಿನ ಮೇಲೆಗೆ ಪಿಎಸ್ಸೈ ಶಶಿಧರ್ ಮತ್ತು ಸಿಬ್ಬಂದಿ ತಡ ರಾತ್ರಿಯ ವರೆವಿಗೂ ಕಾದು ನಾಲ್ವರನ್ನೂ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು. ಮೊದಲಿಗೆ ನಾಲ್ವರನ್ನು ಸರೆಂಡರ್ ಆಗಲು ಕೂಗಿ ಹೇಳಲಾಯಿತು. ಅವರಲ್ಲಿ ಇಬ್ಬರು ತಮ್ಮಲ್ಲಿದ್ದ ಲಾಂಗ್ ಹೊರ ತೆಗೆದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಸುತ್ತುವರಿದ ಸಿಬ್ಬಂದಿ ಅವರನ್ನು ಬಂಧಿಸಿದರು ಎಂದು ಶಶಿಧರ್ ತಿಳಿಸಿದರು. ಬಂಧಿತರ ಬಳಿ ಇದ್ದ ನಾಲ್ಕು ಲಾಂಗ್ಗಳು, ಮಚ್ಚು, ಖಾರದ ಪುಡಿ ವಶಪಡಿಸಿಕೊಳ್ಳಲಾಗಿದೆ.