ಬಹುಕೋಟಿ ಹಗರಣ ಲೋಕಾಯುಕ್ತ ದಾಳಿ
ಕ.ಪ್ರ.ವಾರ್ತೆ ರಾಮನಗರ ಜೂ.11-
ಲೋಕೋಪಯೋಗಿ ಇಲಾಖೆಯ ಮಾಗಡಿ ಉಪವಿಭಾಗದಲ್ಲಿ ನಡೆದಿರುವ ಬಹುಕೋಟಿ ಹಗರಣ ಸಂಬಂಧಿಸಿದಂತೆ ಇಲಾಖೆ ಕಚೇರಿ ಮೇಲೆ ದಾಳಿ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿರುವ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ಲೋಕಾಯುಕ್ತ ತಂಡ ಜೂ.4 ರಿಂದ ನಿರಂತರವಾಗಿ ದಾಖಲೆಗಳ ಶೋಧ ಕಾರ್ಯ ಮುಂದುವರಿಸಿದೆ. ಈವರೆಗೆ 1547 ಕಡತಗಳನ್ನು ವಶಕ್ಕೆ ಪಡೆದಿದ್ದು, ಇನ್ನಷ್ಟು ಕಡತಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ 600 ಕೋಟಿ ಅವ್ಯವಹಾರ ಬೆಳಕಿಗೆ ಬಂದಿತ್ತು. ಈ ಪೈಕಿ ಮಾಗಡಿ ತಾಲೂಕು ಒಂದರಲ್ಲೇ ಸುಮಾರು 300 ಕೋಟಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಅಧಿವೇಶನದಲ್ಲಿ ರಚಿಸಲಾಗಿದ್ದ ಸದನ ಸಮಿತಿ ಈಗಾಗಲೇ ವರದಿ ಸಲ್ಲಿಸಿದ್ದು, ತಪ್ಪಿತಸ್ಥ ಗುತ್ತಿಗೆದಾರರಿಂದ ಹಣ ವಸೂಲಿಗೆ ಶಿಫಾರಸು ಮಾಡಿದೆ. ಈ ಹಗರಣದಲ್ಲಿ ಭಾಗಿಯಾದ ಆರೋಪದಡಿ ಕೆಲವು ಅಧಿಕಾರಿಗಳು ಅಮಾನತುಗೊಂಡಿದ್ದಾರೆ.
ಎಫ್‌ಐಆರ್ ಸಲ್ಲಿಕೆ: ಅವ್ಯಹಾರ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತ ಈಗಾಗಲೇ ನ್ಯಾಯಾಲಯಕ್ಕೆ ಎಫ್‌ಐಆರ್ ಸಲ್ಲಿಸಿದೆ. ಆರೋಪಿಗಳು ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿಗಳಾದ ನಿಜಾಮುದ್ದೀನ್, ಗಿರಿಜೇಶ್ ನೇತೃತ್ವದಲ್ಲಿ ಎಸ್‌ಐಗಳಾದ ಪಿ.ಕೆ.ರಾಜು, ಪ್ರದೀಪ್, ಸಂತೋಷ್, ಸಿಬ್ಬಂದಿ ರಾಮಸ್ವಾಮಿ ಅವರನ್ನೊಳಗೊಂಡ ತಂಡ ಲೋಕೋಪಯೋಗಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲಿಸುತ್ತಿದೆ.