ವಿಜ್ಞಾನ ಬೆಳೆದಂತೆ ಆಚಾರ ವಿಚಾರದಲ್ಲೂ ಬದಲಾವಣೆ
ಕ.ಪ್ರ.ವಾರ್ತೆ ನೆಲಮಂಗಲ ಜೂ.11
ವಿಜ್ಞಾನ ಬೆಳೆದಂತೆ ಜನರ ಆಚಾರ ವಿಚಾರ ಮತ್ತು ಸಂಸ್ಕೃತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿ ತಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಂಡು ಸಂಸಾರದಲ್ಲಿನ ಇತರರಿಗೂ ತೊಂದರೆ ಕೊಡುವ ಪ್ರವೃತ್ತಿ ಸಾಕಷ್ಟು ಕಾಣುತ್ತಿರುವುದು ಅತ್ಯಂತ ಕಳವಳಕಾರಿ ವಿಷಯ ಎಂದು ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಆರ್ಶೀವಚನದಲ್ಲಿ ತಿಳಿಸಿದರು.
ಅವರು ತಾಲೂಕಿನ ಸೋಂಪುರ ಹೋಬಳಿ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಮಹದೇಶ್ವರಸ್ವಾಮಿ ಪರಾವು ಮತ್ತು ಬಸವೇಶ್ವರಸ್ವಾಮಿಯ ಅಕ್ಕಿ ಪೂಜೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡುತ್ತಾ ತಮ್ಮ ಧರ್ಮದ ಸಂಸ್ಕೃತಿ ಆಚಾರಗಳನ್ನು ಯಾರು ಮರೆಯುತ್ತಾರೆಯೋ ಅವರು ತಮ್ಮ ಜೀವನ ಕ್ರಮದ ಹತೋಟಿಯನ್ನೆ ಕಳೆದುಕೊಳ್ಳುತ್ತಾರೆ. ಮುಂದೆ ದಾರಿ ತೋರದೆ ತನ್ನ ಗುರಿ ಮತ್ತು ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿ ದಾರಿ ತಪ್ಪುತ್ತಾರೆ. ಇವರನ್ನು ನಂಬಿದವರು ಮತ್ತು ಕುಟುಂಬ ಸಮೇತ ಬೀದಿ ಪಾಲಾಗುತ್ತಾರೆ. ಇದನ್ನು ತಪ್ಪಿಸಲು ಆಸೆಯನ್ನು ತೊರೆದು ಶರಣರ ಮತ್ತು ದಾರ್ಶನಿಕರ ಮಾರ್ಗದರ್ಶನದಂತೆ ನಡೆದುಕೊಂಡು ಮಾರ್ಗ ಕಂಡುಕೊಳ್ಳಬೇಕು ಎಂದರು.
ಕೆಟ್ಟ ಚಟಕ್ಕೆ ಬಲಿಯಾಗಬೇಡಿ: ತಮ್ಮ ಧರ್ಮ ಮತ್ತು ಸಂಸ್ಕೃತಿಯ ತಳಹದಿಯ ಮೇಲೆ ತಾವು ಸಾಗಬೇಕು ಜೀವನಕ್ಕೆ ಅವಶ್ಯಕವಾದ ಅಂಶಗಳನ್ನು ಬಳಸಿಕೊಂಡು ಬೆಳೆಯುತ್ತಿರುವ ಜಗತ್ತಿನಲ್ಲಿ ತಾವು ಬೆಳೆದು ತಮ್ಮನ್ನು ನಂಬಿದವರನ್ನು ಬೆಳೆಸುವ ಪ್ರಯತ್ನ ಮಾಡಿ ಸುಖ ಜೀವನ ನಡೆಸಿ ಯಾವುದೇ ಕೆಟ್ಟ ಚಟಕ್ಕೆ ಬಲಿಯಾಗಬೇಡಿ ಎಂಬ ಕಿವಿ ಮಾತು ಹೇಳಿದರು.
ಶ್ರೀಗಳ ಮೇಲೆ ಅಪಾರ ಭಕ್ತಿ: ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡುತ್ತಾ ಹೊನ್ನೇನಹಳ್ಳಿ ಗ್ರಾಮದಲ್ಲಿನ ಜನ ಸಿದ್ದಗಂಗೆಯ ಶ್ರೀಗಳ ಬಗ್ಗೆ ಅಪಾರ ಭಕ್ತಿಯನ್ನಿಟ್ಟುಕೊಂಡಿದ್ದಾರೆ ಎಂಬುದಕ್ಕೆ ಪ್ರತಿ ಮನೆಯ ಮುಂದೆ ತಳಿರು ತೋರಣ ಕಟ್ಟಿ ಶೃಂಗಾರ ಮಾಡಿ ಭಯ ಭಕ್ತಿಯಿಂದ ಸ್ವಾಮೀಜಿಯವರನ್ನು ಸ್ವಾಗತಿಸಿದ್ದು ಮತ್ತು ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಹೊನ್ನಮ್ಮ ಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಂಬಾಳು ಮಠದ ಸಿದ್ದಲಿಂಗ ಸ್ವಾಮೀಜಿ, ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ, ನೆಲಮಂಗಲ ಯೋಜನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಪಿ. ಆನಂದ್, ವೀರಶೈವ ಮಹಾಸಭೆ ಅಧ್ಯಕ್ಷ ಸೇವ್ಯಾನಾಯ್ಕ, ಗ್ರಾಮ ಸದಸ್ಯರು ಮತ್ತು ಹಲವು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮಂಗಳವಾದ್ಯ, ವೀರಗಾಸೆ ನೃತ್ಯ, ನಂದಿ ಧ್ವಜ, ಶಾಲಾ ಮಕ್ಕಳಿಂದ ಬ್ಯಾಂಡ್‌ಸೆಟ್‌ಗಳ ಸಮೇತ 106 ಕುಂಬಗಳೊಂದಿಗೆ ಶ್ರೀ ಶಿವಕುಮಾರಸ್ವಾಮೀಜಿ ಮತ್ತು ಹರಗುರು ಚರಮೂರ್ತಿಗಳನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಗ್ರಾಮದ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಅಕ್ಕಿ ಪೂಜೆಯನ್ನು ವ್ಯವಸ್ಥಿತವಾಗಿ ಸಿದ್ಧಗೊಳಿಸಲಾಗಿತ್ತು.