ವೈಜ್ಞಾನಿಕ ಕಸ ವಿಲೇವಾರಿ ಯಂತ್ರ ಖರೀದಿ
ಕ.ಪ್ರ.ವಾರ್ತೆ ರಾಮನಗರ ಜೂ.11
ಬಿಬಿಎಂಪಿ ತನ್ನ ವ್ಯಾಪ್ತಿಯ ಕಸ ವಿಲೇವಾರಿಗೆ ಘಟಕ ತೆರೆಯಲು ಜಾಗದ ಹುಡುಕಾಟದಲ್ಲೇ ತೊಡಗಿದೆ. ಆದರೆ, ರಾಮನಗರ ನಗರಸಭೆ ಆಡಳಿತವು ವೈಜ್ಞಾನಿಕ ಕಸ ವಿಲೇವಾರಿ ಯಂತ್ರ ಖರೀದಿಗೆ ಮುಂದಾಗುವ ಮೂಲಕ ಮಾದರಿಯಾಗಿದೆ.
ಕಸವಿಲೇವಾರಿಗೆ ಎಂದೇ ಮುಂಬೈ ಮೂಲದ ಆಂಪೋಲ್ಟ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿ. ಸಂಸ್ಥೆ ಆವಿಷ್ಕರಿಸಿರುವ ಸ್ಟೆಪ್ಸ್ ಪಲಿಕಾ ರ್ಯಾಕ್ ಸಿಸ್ಟಂ ಅಳವಡಿಕೆಗೆ ರಾಮನಗರ ನಗರಸಭೆ ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಿದ್ಧತೆ ನಡೆದಿದೆ.
ಯಂತ್ರ ಆವಿಷ್ಕರಿಸಿರುವ ಸಂಸ್ಥೆಯು ಸದರಿ ಯಂತ್ರದ ಕಾರ್ಯಕ್ಷಮತೆ ಕುರಿತ ಪ್ರಾತ್ಯಕ್ಷಿಕೆಯನ್ನು ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಸಮಕ್ಷಮದಲ್ಲಿ ಮಂಗಳವಾರ ನಡೆಸಿಕೊಟ್ಟಿತು. ಇದರಿಂದ ಪ್ರೇರಿತರಾದ ಸ್ವತಃ ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳು ಯಂತ್ರದ ಅಳವಡಿಕೆಗೆ ಆಸಕ್ತಿ ತೋರಿದ್ದಾರೆ.
ಯಂತ್ರದ ವಿಶೇಷತೆ: ಈ ಯಂತ್ರವು ಕಸದಿಂದ ಗ್ಯಾಸ್, ಕಚ್ಚಾ ತೈಲ, ಕಾರ್ಬನ್ ಉತ್ಪಾದಿಸುತ್ತದೆ. ಹೀಗೆ ಉತ್ಪಾದನೆಯಾಗುವ ಸ್ವಲ್ಪ ಭಾಗದ ಗ್ಯಾಸ್ ಬಳಿಸಿಕೊಂಡೇ ಸದರಿ ಯಂತ್ರ ನಡೆಸಬಹುದು.
ಉಳಿದ ಗ್ಯಾಸ್, ತೈಲ ಮತ್ತು ಕಾರ್ಬನ್ ಮಾರಾಟದಿಂದ ಲಾಭ ಪಡೆಯಬಹುದಾಗಿದೆ.
ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಇಲ್ಲದಂತೆ ಕಸ ವಿಲೇವಾರಿ ಮಾಡುವ ಈ ಯಂತ್ರದಿಂದ ಭರ್ಜರಿ ಆದಾಯವನ್ನೂ ಪಡೆಯಬಹುದು. ಕಸ ವಿಲೇವಾರಿಗೆ ಬಿಬಿಎಂಪಿಯಂತೆ ಎಕರೆಗಟ್ಟೆಲೆ ಜಾಗ ಹುಡುಕುವ ಪ್ರಮೇಯವೇ ಇಲ್ಲ.
ಸಂಸ್ಥೆಗಳ ಪಾಲುದಾರಿಕೆ: ವೈಜ್ಞಾನಿಕ ಕಸ ವಿಲೇವಾರಿ ಯಂತ್ರವನ್ನು ಅಳವಡಿಸುವುದಕ್ಕೆ ಪೂರ್ಣ ವೆಚ್ಚವನ್ನು ನಗರಸಭೆಯೇ ಭರಿಸಬೇಕಿಲ್ಲ.
ಯಂತ್ರ ಆವಿಷ್ಕರಿಸಿರುವ ಆಂಪೋಲ್ಟ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿ. ಸಂಸ್ಥೆಯು ಶೇಕಡ 55ರಷ್ಟು ಬಂಡವಾಳ ಭರಿಸಲಿದ್ದು, ಉಳಿಕೆ ಶೇಕಡ 45ರಷ್ಟು ಪಾಲು ಮಾತ್ರವೇ ನಗರಸಭೆಯದು.
ಬರುವಂತಹ ಆದಾಯವನ್ನೂ 55-45ರ ಪ್ರಮಾಣದಲ್ಲೇ ಹಂಚಿಕೊಳ್ಳುವ ಕರಾರು ಏರ್ಪಡಲಿದೆ. ಪ್ರತಿ ದಿನ 5 ಟನ್ ಕಸವನ್ನು ರೀಸೈಕ್ಲಿಂಗ್ ಮಾಡಬಹುದಾದ ಯಂತ್ರದ ಘಟಕ ಸ್ಥಾಪಿಸುವುದಕ್ಕೆ ರು.5 ಕೋಟಿ ವೆಚ್ಚ ತಗುಲುತ್ತದೆ. ಒಂದು ಘಟಕಕ್ಕೆ ಗರಿಷ್ಠ 100 ್ಗ 100 ಜಾಗ ಸಾಕಾಗುತ್ತದೆ.
ರಾಮನಗರವೇ ಮೊದಲು: ಬೆಂಗಳೂರಿನಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ ದಿನವಹಿ 1 ಕ್ವಿಂಟಾಲ್ ಕಸ ವಿಲೇವಾರಿ ಮಾಡಬಹುದಾದ ಸಾಮರ್ಥ್ಯದ ಯಂತ್ರವನ್ನು ಆಂಪೋಲ್ಟ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿ. ಸಂಸ್ಥೆ ಅಳವಡಿಸಿದೆ. ಇದರ ಹೊರತಾಗಿ ರಾಜ್ಯದಲ್ಲಿ ಬೇರೆಲ್ಲೂ ಘಟಕ ಪ್ರಾರಂಭವಾಗಿಲ್ಲ.
ನಾಲ್ಕಾರು ಸ್ಥಳೀಯ ಸಂಸ್ಥೆಗಳಲ್ಲಿ ಯಂತ್ರದ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಾಗಿದೆ. ಆದರೆ, 5 ಟನ್ ಕಸ ವಿಲೇವಾರಿಯ ಯಂತ್ರ ಅಳವಡಿಕೆಗೆ ಒಪ್ಪಂದಕ್ಕೆ ಮುಂದಾಗಿರುವ ಸ್ಥಳೀಯ ಸಂಸ್ಥೆಗಳಲ್ಲಿ ರಾಮನಗರವೇ ಮೊದಲನೆಯದೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚಿದಾನಂದ ಪ್ರಯತ್ನ: ಪ್ರಸ್ತುತ ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿರುವ ಚಿದಾನಂದ ಅವರು ಈ ಹಿಂದೆ ನಗರಸಭೆಯ ಪ್ರಭಾರ ಆಯುಕ್ತರಾಗಿದ್ದಾಗ ಮುಂಬೈಗೆ ತೆರಳಿ ಸದರಿ ಯಂತ್ರದ ಕಾರ್ಯ ವೈಖರಿ ಕುರಿತು ಪರಿಶೀಲಿಸಿ ಬಂದಿದ್ದರು. ನಂತರ ಆಂಪೋಲ್ಟ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿ. ಸಂಸ್ಥೆಯೊಂದಿಗೆ ವ್ಯವಹರಿಸಿದ್ದರು. ಈ ಬಗ್ಗೆ ಆಡಳಿತಾಧಿಕಾರಿ ಜತೆಗೆ ಚರ್ಚಿಸಿ, ಕಡತವನ್ನೂ ಸಿದ್ಧಪಡಿಸಿದ್ದರು. ಇದೀಗ ಪ್ರಾತ್ಯಕ್ಷಿಕೆಯೊಂದಿಗೆ ಘಟಕ ಸ್ಥಾಪನೆ ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದೆ.
ಕಸದ ಉತ್ಪನ್ನಗಳು: 1 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಯಂತ್ರಕ್ಕೆ ಹಾಕಿದರೆ 750 ಕೆಜಿ ಕಚ್ಚಾ ತೈಲ, 120 ಕೆಜಿ ಗ್ಯಾಸ್, 50 ರಿಂದ 100 ಕೆಜಿ ಕಾರ್ಬನ್ ಉತ್ಪಾದನೆಯಾಗುತ್ತದೆ. ಇತರೆ ಪ್ರತಿ ಟನ್ ತ್ಯಾಜ್ಯದಲ್ಲಿ 150 ಕೆಜಿ ತೈಲ, 120 ಕೆಜಿ ಗ್ಯಾಸ್, 150 ಕೆಜಿ ಕಾರ್ಬನ್ ದೊರೆಯುತ್ತದೆ ಎಂದು ಆಂಪೋಲ್ಟ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿ. ಸಂಸ್ಥೆಯ ಪ್ರತಿನಿಧಿಗಳು ಪ್ರಾತ್ಯಕ್ಷಿಕೆ ವೇಳೆ ವಿವರಿಸಿದರು.
ಸರ್ಕಾರಕ್ಕೆ ಪ್ರಸ್ತಾವನೆ
ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಅತ್ಯಾಧುನಿಕ ಘಟಕ ಸ್ಥಾಪನೆಗೆ ಸರ್ಕಾರದ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಯಶಸ್ವಿಯಾದಲ್ಲಿ ಜಿಲ್ಲೆಯ ಉಳಿದ 3 ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲೂ ಘಟಕ ಸ್ಥಾಪಿಸಲು ಮುಂದಾಗಲಾಗುವುದು.
ಟಿ ವಿ.ಶ್ರೀರಾಮರೆಡ್ಡಿ, ಡಿಸಿ, ನಗರಸಭೆ ಆಡಳಿತಾಧಿಕಾರಿ.