ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆಯುರ್ವೇದ ಔಷಧ ವ್ಯತಿರಿಕ್ತ ಪರಿಣಾಮ ಇಲ್ಲ

Rashmi Kasaragodu
Updated On : 13 Jun 2013, 12:33 pm

ಕ.ಪ್ರ. ವಾರ್ತೆ    ನೆಲಮಂಗಲ    ಜೂ.12
ಪಾರಂಪರಿಕ ವೈದ್ಯ ಪದ್ಧತಿಯಾದ ಆಯುರ್ವೇದವು ಪ್ರಕೃತಿ ದತ್ತವಾದ ಗಿಡಮೂಲಿಕೆಗಳಿಂದ ಔಷಧಗಳನ್ನು ತಯಾರಿಸಿ ಚಿಕಿತ್ಸೆ ನೀಡುವುದರಿಂದ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲಾ ಎಂದು ಆಯುರ್ವೇದ ಪಂಡಿತ್ ಶಂಕರ್ ತಿಳಿಸಿದರು.
ಅವರು ಮಂಗಳವಾರ ತಾಲೂಕಿನ ಸಿದ್ದರಬೆಟ್ಟದ ತಪ್ಪಲಿನಲ್ಲಿರುವ ಅಂಚೆಪಾಳ್ಯ ಗ್ರಾಮದಲ್ಲಿ ಔಷಧಿಯ ಗುಣಗಳಿರುವ ಸಸ್ಯಗಳ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಜನತೆ ಆಧುನಿಕ ಔಷದೋಪಚಾರಕ್ಕೆ ಮಾರು ಹೋಗಿದ್ದು ಹಿತ್ತಲ ಗಿಡ ಮದ್ದಲ್ಲ ಎಂದು ಅದಕ್ಕೆ ಇತಿಶ್ರೀ ಹಾಡುತ್ತಿದ್ದಾರೆ. ಹಿತ್ತಲಗಿಡ ಮದ್ದು ಎಂಬುದನ್ನು ಸಾಬೀತು ಪಡಿಸುವ ನಿಟ್ಟಿನಲ್ಲಿ ಪ್ರಕೃತಿಯೂ ಸಹ ವಿಜ್ಞಾನದ ಚಿಕಿತ್ಸೆಗೆ ಕೆಲವು ಸವಾಲನ್ನೆ ಒಡ್ಡಿದೆ ಎಂಬುದನ್ನು ಇಂದಿಗೂ ಕೆಲವು ಆಯುರ್ವೇದದ ಪಂಡಿತರು ಸಾಬೀತು ಪಡಿಸುತ್ತಲೆ ಬಂದಿದ್ದಾರೆ ಎಂದು ಹೇಳಿದರು.
ವಿಜ್ಞಾನಕ್ಕೆ ಸವಾಲು: ಗ್ರಾಮದ ಮುಖಂಡ ಲಕ್ಷ್ಮೀನಾರಾಯಣ್ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ತಮ್ಮ ದುಡಿಮೆಯ ಶೇ.50ರಷ್ಟನ್ನು ಆರೋಗ್ಯದ ಕಾಳಜಿಗಾಗಿಯೇ ವ್ಯಯಿಸುವಂತ ದಿನಗಳು ಹತ್ತಿರವಾಗುತ್ತಿವೆ. ಕಾರಣ ನಿಗೂಢ ಕಾಯಿಲೆಗಳು ಬಾಧಿಸುತ್ತಿದ್ದು ಯಾವುದೇ ಚಿಕಿತ್ಸೆಗೂ ಬಗ್ಗದ ವಿಜ್ಞಾನಕ್ಕೆ ಸವಾಲಾಗಿದೆ. ಈ ರೀತಿಯ ರೋಗಕ್ಕೆ ತುತ್ತಾದರೆ ವಿಧಿಯಿಲ್ಲದೆ ದುಡಿಮೆಯ ಹಣವೆಲ್ಲವನ್ನು ಜೀವ ಉಳಿಸಿಕೊಳ್ಳಲು ಬಳಸಬೇಕಾಗುತ್ತದೆ ಎಂದು ತಿಳಿಸಿದರು.
ಕಾಯಿಲೆಗೆ ತುತ್ತು: ಹಿಂದಿನ ದಿನಗಳಲ್ಲಿ ನಮ್ಮ ಪೂರ್ವಜರು  ತಾವೇ ಶ್ರಮ ವಹಿಸಿ ಬೆಳೆದ ಕಾಯಿಪಲ್ಯಗಳು, ಆಹಾರದ ದಾನ್ಯಗಳು, ಸೊಪ್ಪು, ತರಕಾರಿಗಳು, ಹಾಲು ಮೊಸರು, ತುಪ್ಪ ಎಲ್ಲವೂ ತಾಜವಾಗಿರುತ್ತಿದ್ದವು. ಇಂಥಹ ಸಂಪೂರ್ಣ ತಾಜಾ ಆಹಾರ ಧಾನ್ಯಗಳು ಮಾಯವಾಗಿ ರಾಸಾಯನಿಕ ಗೊಬ್ಬರ ಔಷಧ ಮಿಶ್ರಿತ ಆಹಾರ ಸೇವನೆಯಿಂದ ಜನ ಗುರುತಿಸಲಾಗದ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದರು.
ಸದೃಢ ಆರೋಗ್ಯ ಹೊಂದಲು ನಮ್ಮ ಹಿರಿಯರು ಬಳಸುತ್ತಿದ್ದ ಆಹಾರ ಪದ್ಧತಿ ಮತ್ತು ರೋಗಗಳಿಗೆ ಬಳಸುತ್ತಿದ್ದ ಆಯುರ್ವೇದದ ಗಿಡಮೂಲಿಕೆ ಔಷಧಿ ಸೇವನೆಯ ಕ್ರಮವನ್ನು ಅಳವಡಿಸಿಕೊಳ್ಳಲು ನಾವು ಮಾನಸಿಕವಾಗಿ ಬಲಿಷ್ಠರಾಗಬೇಕು. ಈ ರೀತಿ ಮನಸ್ಸಿನ ಧೈರ್ಯ ತೆಗೆದುಕೊಂಡರೆ ಅದೇ ಅರ್ಧ ಔಷಧಿಯಂತೆ ಪರಿಣಾಮ ಬೀರುತ್ತದೆ ಎಂದರು.
ಪ್ರತಿಯಬ್ಬರೂ ತಮ್ಮ ಆರೋಗ್ಯ ಸಮಸ್ಯೆಗಳು ಎದುರಾದಾಗ ವೈದ್ಯರ ಬಳಿ ಯಾವುದೇ ರೀತಿಯ ಅಂಜಿಕೆ ಇಟ್ಟುಕೊಳ್ಳದೆ ಮುಕ್ತವಾಗಿ ಚರ್ಚಿಸಿ ಸೂಕ್ತ ಚಿಕಿತ್ಸೆಗೆ ಮುಂದಾಗಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement