ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗಬ್ಬುನಾರುವ ತ್ಯಾಜ್ಯ ತೆಗೆದು ಗುಂಡಿ ಮುಚ್ಚಿದರು!

Rashmi Kasaragodu
Updated On : 13 Jun 2013, 12:52 pm

ಕ.ಪ್ರ.ವಾರ್ತೆ ಟಿ ರಾಮನಗರ ಟಿ ಜೂ.12
ಚರಂಡಿ ಹೂಳು ಮತ್ತು ಗಬ್ಬುನಾರುವ ತ್ಯಾಜ್ಯವನ್ನು ತೆಗೆದು ಗುಂಡಿ ಮುಚ್ಚುವ ಕೆಲಸ ನಗರದ ಹೃದಯ ಭಾಗದಲ್ಲಿರುವ ಐಜೂರು ಬಡಾವಣೆ ತಿರುವಿನಲ್ಲಿ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮಗ್ಗುಲಲ್ಲಿ ನಡೆದ ಈ ಕೆಲಸ ಮಾಡಿರುವವರು ಯಾರೋ ತಿಳಿಗೇಡಿಗಳಲ್ಲ. ಬದಲಿಗೆ ರಾಮನಗರವನ್ನು ಮಾದರಿ ನಗರವನ್ನಾಗಿಸುವ ಸಂಕಲ್ಪ ತೊಟ್ಟಿರುವ ನಗರಸಭೆ ಸಿಬ್ಬಂದಿ.  
28ನೇ ವಾರ್ಡ್‌ನಲ್ಲಿರುವ ಬಸ್ ನಿಲ್ದಾಣದ ಪಕ್ಕದ ಚರಂಡಿ ಮುಚ್ಚಿ ಹೋಗಿದ್ದು, ಗಬ್ಬು ವಾಸನೆ ಬೀರುತ್ತಿರುವ ಜತೆಗೆ ಸೊಳ್ಳೆಗಳ ಹಾವಳಿ ಹೆಚ್ಚಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ನಗರಸಭೆ ಆಯುಕ್ತ ಯಶವಂತ್ ಮೂರು ದಿನಗಳ ಹಿಂದೆ ಖುದ್ದು ಭೇಟಿಯಿತ್ತು ಪರಿಶೀಲಿಸಿದ್ದರು.
ಮಾರನೆ ದಿನವೇ ಸಿಬ್ಬಂದಿಯನ್ನು ಕರೆತಂದ ಆಯುಕ್ತರು ಚರಂಡಿಯಲ್ಲಿದ್ದ ಹೂಳು, ತ್ಯಾಜ್ಯವನ್ನೆಲ್ಲಾ ತೆಗೆಸಿ ಒಂದಿಷ್ಟು ಬ್ಲೀಚಿಂಗ್ ಪೌಂಡರ್ ಸಿಂಪಡಣೆ ಮಾಡಿಸಿದರು. ಆಯುಕ್ತರು ಸ್ಥಳದಲ್ಲಿದ್ದಾಗಲೇ ಸಿಬ್ಬಂದಿಯು ಹೂಳು ಮತ್ತು ತ್ಯಾಜ್ಯದಿಂದ ಪಕ್ಕದಲ್ಲೇ ಇದ್ದ ಗುಂಡಿ ಮುಚ್ಚಿದ್ದಾರೆ.
ಬೇಜವಾಬ್ದಾರಿತನ: ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿಯ ಬೇಜವಬ್ದಾರಿತನದಿಂದಾಗಿ ವಾಹನ, ಜನ ದಟ್ಟಣೆಯಿಂದ ಕೂಡಿರುವ ಐಜೂರಿನ ಈ ರಸ್ತೆಯಲ್ಲಿ ಜನರು ಮೂಗು ಮುಚ್ಚಿಕೊಂಡು ತಿರುಗುವಂತಾಗಿದೆ. ಇಷ್ಟಲ್ಲದೆ, ಕೊಚ್ಚೆ ಗುಂಡಿಯಂತಾಗಿರುವ ಇಲ್ಲಿ ಸಾಗುವ ದ್ವಿಚಕ್ರ ವಾಹನಗಳು ಸವಾರರ ನಿಯಂತ್ರಣಕ್ಕೆ ಸಿಗದೆ ಜಾರುತ್ತಿವೆ.
ರಾಮನಗರ ಜಿಲ್ಲೆಯಲ್ಲಿ ಡೆಂಘೀ ಸೇರಿದಂತೆ ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ. ಇಂತಹ ಸಂದರ್ಭದಲ್ಲಿ ನಗರ ನೈರ್ಮಲ್ಯ ಕಾಪಾಡಬೇಕಾದ ನಗರಸಭೆಯು ಮತ್ತಷ್ಟು ಅನೈರ್ಮಲ್ಯ ಉಂಟು ಮಾಡಿರುವುದು ನಿಜಕ್ಕೂ ಬೇಜವಬ್ದಾರಿತನದ ಪರಮಾವಧಿಯೇ ಸರಿ. ಚರಂಡಿ ಹೂಳು ಮತ್ತು ತ್ಯಾಜ್ಯವನ್ನು ತೆಗೆಸಿ ಗುಂಡಿ ಮುಚ್ಚಿ ಅವಾಂತರ ತಂದೊಡ್ಡಿರುವ  ನಗರಸಭೆಯು ತಕ್ಷಣ ಎಚ್ಚೆತ್ತುಕೊಂಡು, ಆಗಿರುವ ತಪ್ಪನ್ನು ಸರಿಪಡಿಸಬೇಕು ಎನ್ನುವುದು ಬಡಾವಣೆ ನಿವಾಸಿಗಳ ಒತ್ತಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement