ಬಾಲ ಕಾರ್ಮಿಕ ಪದ್ಧತಿ ದೇಶಕ್ಕೆ ದೊಡ್ಡ ಪಿಡುಗು
ಕ.ಪ್ರ. ವಾರ್ತೆ ರಾಮನಗರ ಜೂ.12
ಬಾಲ ಕಾರ್ಮಿಕ ಪದ್ಧತಿಯು ನಮ್ಮ ದೇಶಕ್ಕೆ ಬಹು ದೊಡ್ಡ ಪಿಡುಗು. ಮಕ್ಕಳ ಹಕ್ಕುಗಳನ್ನು ಕಸಿದುಕೊಂಡು, ಅವರನ್ನು ದುಡಿಮೆಗೆ ಹಾಕಿಕೊಳ್ಳುವಕ್ಕೆ ಅಂತ್ಯವಾಡಬೇಕಿದೆ ಎಂದು ಜಿಲ್ಲಾಧಿಕಾರಿ ವಿ.ಶ್ರೀರಾಮ ರೆಡ್ಡಿ ಕರೆ ನೀಡಿದರು.
ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸೊಸೈಟಿ, ನಗರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳ ಒಕ್ಕೂಟದಿಂದ ಬುಧವಾರ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಪಡೆಯುವುದು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು. ಶಿಕ್ಷಣದಿಂದ ಮಕ್ಕಳನ್ನು ವಂಚಿಸುವುದು ಮತ್ತು ದುಡಿಮೆಗೆ ಹಾಕಿಕೊಳ್ಳುವುದು ಕಾನೂನು ರೀತ್ಯ ಅಪರಾಧವಾಗಿದೆ. 14 ವರ್ಷದೊಳಗಿನ ದುಡಿಯುವ ಮಕ್ಕಳು ಬಾಲ ಕಾರ್ಮಿಕರು. ಅವರಿಂದ ದುಡಿಸಿಕೊಳ್ಳುವವರಿಗೆ ರು.5 ರಿಂದ 10 ಸಾವಿರದವರೆಗೆ ದಂಡ, 2 ವರ್ಷದವರೆಗೆ ಜೈಲು ಶಿಕ್ಷೆ ಇದೆ ಎಂದು ಎಚ್ಚರಿಸಿದರು.
ಬದುಕಲು ಬಿಡಿ: ಮಕ್ಕಳಿಗೆ ಚಿಕ್ಕಂದಿನಲ್ಲೇ ವಿದ್ಯಾಭ್ಯಾಸ ಮಾಡಿಸದಿದ್ದಲ್ಲಿ ಅವರ ಇಡೀ ಜೀವನವೇ ವ್ಯರ್ಥವಾಗುತ್ತದೆ. ಅಲ್ಲದೆ ಅವರ ಮಕ್ಕಳೂ ಕೂಡ ಅವಿದ್ಯಾವಂತರಾಗುವ ಸಾಧ್ಯತೆ ಇರುತ್ತದೆ. ಇತರರಂತೆ ಸಮಾಜದಲ್ಲಿ ಬದುಕಲು ಎಲ್ಲ ಬಡ ಮಕ್ಕಳಿಗೂ ಅನುವು ಮಾಡಿಕೊಡಬೇಕು. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಬಾಲ ಕಾರ್ಮಿಕ ಪದ್ಧತಿಯನ್ನು ತೊಡೆದುಹಾಕಬೇಕು ಎಂದು ಶ್ರೀರಾಮರೆಡ್ಡಿ ಕರೆ ನೀಡಿದರು.
ಬಾಲ ಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಲು ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ರಾಜ್ಯದಾದ್ಯಂತ 1524 ಅಂಗನವಾಡಿ ಕೇಂದ್ರಗಳನ್ನು ತೆರೆದು ಪೌಷ್ಟಿಕ ಆಹಾರ, ಉತ್ತಮ ಶಿಕ್ಷಣವನ್ನು ನೀಡುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸಂಪೂರ್ಣ ಸಾಕ್ಷರತಾ ಆಂದೋಲನದ ಮೂಲಕ ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ನೀಡಲು ಸರ್ಕಾರ ಕಟಿಬದ್ಧವಾಗಿದೆ ಎಂದರು.
96 ಮಂದಿ ಪತ್ತೆ: ಬಾಲ ಕಾರ್ಮಿಕರು ಹೋಟೆಲ್, ಇಟ್ಟಿಗೆ ಕಾರ್ಖಾನೆ, ರೇಷ್ಮೆ ಉದ್ಯಮ, ಮೆಕ್ಯಾನಿಕ್ ಅಂಗಡಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಇವರನ್ನು ಗುರುತಿಸಿ ಬಾಲ ಕಾರ್ಮಿಕ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದು, ಉಚಿತ ವಸತಿ, ಊಟದ ಜತೆಗೆ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ವರ್ಷ 96 ಬಾಲ ಕಾರ್ಮಿಕರನ್ನು ಗುರುತಿಸಿ, ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ. ಜಿಲ್ಲೆಯಲ್ಲಿ 4 ಪುನರ್ವಸತಿ ಕೇಂದ್ರಗಳಿವೆ. ಬಾಲ ಕಾರ್ಮಿಕರಿರುವುದು ತಿಳಿದು ಬಂದಲ್ಲಿ ಕೂಡಲೇ ಸಾರ್ವಜನಿಕರು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಬೇಕು ಎಂದು ವಿ.ಶ್ರೀರಾಮರೆಡ್ಡಿ ತಿಳಿಸಿದರು.
ಚಿವುಟಿ ಹಾಕಬೇಡಿ: ಬಾಲ ಕಾರ್ಮಿಕ ಪದ್ಧತಿಯು ಸ್ವಾಸ್ಥ್ಯ ಸಮಾಜಕ್ಕೆ ಮಾರಕವಾಗಿದೆ. ಚಿಗುರನ್ನು ಚಿವುಟಿ ಹಾಕದೇ ಮರವಾಗಿ ಬೆಳೆಯಲು ಅನುಕೂಲ ಮಾಡಿಕೊಟ್ಟು ಪ್ರೋತ್ಸಾಹಿಸಬೇಕು. ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಬಾರದು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎಚ್. ಹೊಸಗೌಡ, ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ಶಾಂತಪ್ಪ, ಕಾರ್ಯದರ್ಶಿ ಎಂ.ಜಿ. ಮಹೇಶ್, ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಕೆಂಪೇಗೌಡ ಮತ್ತಿತರರು ಹಾಜರಿದ್ದರು.
ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಯಿತು. ಮಿನಿ ವಿಧಾನ ಸೌಧದಿಂದ ಹೊರಟ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಾಲ ಕಾರ್ಮಿಕ ಪದ್ಧತಿಯ ವಿರುದ್ಧದ ಭಿತ್ತಿ ಪತ್ರಗಳನ್ನು ಹಿಡಿದಿದ್ದ ಮಕ್ಕಳು ಘೋಷಣೆಗಳನ್ನು ಕೂಗಿದರು.