ಬಾಲ ಕಾರ್ಮಿಕರ ಪತ್ತೆ ಕಾರ್ಯಾಚರಣೆಗೆ ಮುಂದಾದವರ ಮೇಲೆ ತೀವ್ರ ಹಲ್ಲೆ
ಕ.ಪ್ರ. ವಾರ್ತೆ ರಾಮನಗರ ಜೂ.12
ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಂದೇ ಬಾಲ ಕಾರ್ಮಿಕರ ಪತ್ತೆ ಕಾರ್ಯಾಚರಣೆಗೆ ಮುಂದಾದ ಕಾರ್ಮಿಕ ಇಲಾಖೆ ತಂಡಕ್ಕೆ ಪ್ರತಿರೋಧ ಒಡ್ಡಿದ ಕಿಡಿಗೇಡಿಗಳ ಗುಂಪೊಂದು ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದೆ.
ನಗರದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಸಮಾರಂಭದ ತರುವಾಯ ಕಾರ್ಮಿಕ ಅಧಿಕಾರಿ ನಾಗರಾಜು ಸಿಬ್ಬಂದಿಯೊಂದಿಗೆ ನಗರದ ಕೈಗಾರಿಕಾ ಪ್ರದೇಶದಲ್ಲಿ ಬಾಲ ಕಾರ್ಮಿಕರ ಪತ್ತೆ ಕಾರ್ಯಾಚರಣೆ ಪ್ರಾರಂಭಿಸಿದರು. ನಗರದ ಕೈಗಾರಿಕಾ ಪ್ರದೇಶದಲ್ಲಿನ ವಾಹನ ರಿಪೇರಿ ಅಂಗಡಿಯಲ್ಲಿ ಕಾರ್ಮಿಕ ಇಲಾಖೆ ತಂಡ ಬಾಲಕ ಸಲ್ಮಾನ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿತು. ಪಕ್ಕದ ಅಂಗಡಿಗೆ ತೆರಳುತ್ತಿದ್ದಂತೆಯೇ ಅಲ್ಲಿದ್ದ ಬಾಲ ಕಾರ್ಮಿಕ ಓಡಿ ಹೋದನು.
ಓಡಿ ಹೋದ ಬಾಲಕನನ್ನು ಹಿಂಬಾಲಿಸುತ್ತಿದ್ದ ಇಲಾಖೆ ಸಿಬ್ಬಂದಿ ಶಿವಶಂಕರ್ ಅವರನ್ನು 20ಕ್ಕೂ ಹೆಚ್ಚು ಮಂದಿಯಿದ್ದ ಕಿಡಿಗೇಡಿಗಳ ಗುಂಪು ಅಡ್ಡಗಟ್ಟಿತು. ಬಳಿಕ ಗುಂಪಿನಲ್ಲಿದ್ದವರು ಶಿವಶಂಕರ್ ಮೇಲೆ ಹಲ್ಲೆ ನಡೆಸಿದ್ದಾರೆ. ಕಿಡಿಗೇಡಿಗಳ ಹಲ್ಲೆಯಿಂದಾಗಿ ಕಾರ್ಮಿಕ ಇಲಾಖೆ ನೌಕರ ಶಿವಶಂಕರ್ ಅವರ ಮುಖಕ್ಕೆ ಗಾಯವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಅವರು ಹಲ್ಲೆ ಸಂಬಂಧ ಐಜೂರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.