ಬಿಸಿಯೂಟ ಸೇವಿಸಿದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ಕ.ಪ್ರ.ವಾರ್ತೆ ಸೂಲಿಬೆಲೆ ಜೂ.12
ಹೊಸಕೋಟೆ ತಾಲೂಕಿನ ಬೈಲುನರಸಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬುಧವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಘಟನೆಗೆ ಬಿಸಿಯೂಟದ ವಿಷಪೂರಿತ ಆಹಾರಸೇವನೆಯ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಮಧ್ಯ ಘಟನೆಯ ಸಂಬಂಧ ಆಸ್ಪತ್ರೆಗೆ ಧಾವಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಸಿ. ಬಸವರಾಜೇಗೌಡ ಯಾವುದೇ ಮಗುವಿಗೆ ಅಪಾಯವಿಲ್ಲ. ಎಲ್ಲ ಮಕ್ಕಳನ್ನು ವೈದ್ಯರಿಂದ ತಪಾಸಣೆ ಮಾಡಿ ಪೋಷಕರೊಂದಿಗೆ ಮನೆಗೆ ಕಳುಹಿಸಲಾಗಿದೆ. ಪರಿಶೀಲನೆ ಮಾಡಿ ಘಟನೆ ಬಗ್ಗೆ ಕ್ರಮ ಕೈಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಡೆದಿದ್ದೇನು: ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬೈಲುನರಸಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 1ರಿಂದ 7 ನೇತರಗತಿಯವರಿಗೂ 172 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಇವರಿಗೆ ಮಧ್ಯಾಹ್ನದ ಬಿಸಿಯೂಟವನ್ನು ನಂದಾದೀಪ ಎಂಬ ಖಾಸಗಿ ಸಂಸ್ಥೆ ಪಡೆದುಕೊಂಡಿದೆ. ಈ ಶಾಲೆಯ ಮಾರ್ಗದಲ್ಲಿ ಬರುವ 39 ಶಾಲೆಗಳ 7,694 ವಿದ್ಯಾರ್ಥಿಗಳಿಗೆ ಬಿಸಿಯೂಟದ ಹೊಣಿ ಹೊತ್ತಿದ್ದ ಸಂಸ್ಥೆ ಬುಧವಾರ ಮಧ್ಯಾಹ್ನ ಎಂದಿನಂತೆ ಅನ್ನ, ಬೆಳೆ ಸಾಂಬರನ್ನು ಮಕ್ಕಳಿಗೆ ನೀಡಿದೆ. ತಿಂದ ಸ್ವಲ್ಪ ಸಮಯದಲ್ಲಿಯೇ ವಿದ್ಯಾರ್ಥಿಗಳಿಬ್ಬರು ಹೊಟ್ಟೆ ನೋವು ಮತ್ತು ತಲೆ ಸುತ್ತುತ್ತಿದೆ ಎಂದು ಕೆಳೆಗೆ ಬಿದ್ದಿದ್ದಾರೆ. ತಕ್ಷಣ ಶಿಕ್ಷಕರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿ ವಿಷಪೂರಿತ ಆಹಾರ ಸೇವನೆ ಘಟನೆಗೆ ಕಾರಣವಾಗಿರಬಹುದೆಂದು ಶಂಕಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.
ಇದಾದ ನಂತರು ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಇದೇ ರೀತಿಯಾದ ತೊಂದರೆ ಕಾಣಿಸಿಕೊಂಡ ಪರಿಣಾಮ ಪೋಷಕರು ಗಾಬರಿಗೆ ಬಿದ್ದು ಸಿಕ್ಕ ಸಿಕ್ಕ ವಾಹನಗಳಲ್ಲಿ ಆಸ್ಪತ್ರೆಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಪಡೆದ ಎಲ್ಲ ಮಕ್ಕಳು ಯಾವುದೇ ಪ್ರಾಣಾಪಾಯವಿಲ್ಲದೆ ಮನೆಗೆ ತೆರೆಳಿದ್ದಾರೆ. ವಿಷಯ ತಿಳಿದು ಎಲ್ಲ ಮಕ್ಕಳನ್ನು ತಪಾಸಣೆ ಮಾಡಿಸಿ ಕಳುಹಿಸಲಾಗಿದೆ. ಒಂದೇ ಸಂಸ್ಥೆ 39 ಶಾಲೆಗಳಿಗೆ ಆಹಾರ ಪೂರೈಕೆ ಮಾಡಿದ್ದರೂ ಬೈಲುನರಸಾಪುರ ಹೊರತು ಪಡಿಸಿ ಬೇರೆ ಯಾವುದೇ ಶಾಲೆಯಲ್ಲಿ ಇಂಥ ತೊಂದರೆಯಾಗಿಲ್ಲ. ಕಾರಣ ಏನೆಂದು ತಿಳಿದು ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ಬಸವರಾಜೇಗೌಡ ತಿಳಿಸಿದ್ದಾರೆ.