ವಶಕ್ಕೆ ತೆಗೆದುಕೊಂಡ ಹಣ ವಾರಸುದಾರರಿಗೆ ವಾಪಸ್
ನೆಲಮಂಗಲ: ಮೇ 5ರಂದು ವಿಧಾನಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ನೆಲಮಂಗಲ ಚೆಕ್ ಪೊಸ್ಟ್ ಬಳಿ ಪ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿಗೆ ದಾಖಲೆ ರಹಿತವಾಗಿ ಸಾಗಿಸುತ್ತಿದ್ದ ಒಂದು ಕೋಟಿ ಎಪ್ಪತ್ತು ಲಕ್ಷ (1.70 ಕೋಟಿ) ರು.ಗಳನ್ನು ವಶಕ್ಕೆ ಪಡೆದುಕೊಂಡು ನೆಲಮಂಗಲ ಖಜಾನೆಯಲ್ಲಿರಿಸಿತ್ತು.
ಈಗ ವಾರಸುದಾರರು ದಾಖಲೆ ಸಮೇತ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಬೆಂಗಳೂರಿನ ಮತ್ತಿಕೆರೆಯ ಎಕ್ಸೀಸ್ ಬ್ಯಾಂಕ್‌ನವರು ಈ ಹಣವನ್ನು ಬೆಂಗಳೂರಿನಿಂದ ತುಮಕೂರಿನ ಎ.ಟಿ.ಎಂ.ಗಳಿಗೆ ತುಂಬಲು ಹಣ ಸಾಗಿಸುತ್ತಿದ್ದಾಗ ಚುನಾಣೆಯಲ್ಲಿ ಅಕ್ರಮವಾಗಿ ಹಣ ಮತ್ತು ಇತರೆ ವಸ್ತುಗಳನ್ನು ತಪಾಸಣೆ ಮಾಡುತ್ತಿದ್ದ ತಂಡವು ಈ ಹಣ ಸಾಗಿಸುತ್ತಿದ್ದ ಕಾರುಗಳನ್ನು ತಡೆದು ಪರಿಶೀಲಿಸಿದಾಗ ಕಂಡು ಬಂದ ಹಣಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದರಿಂದ ಚುನಾವಣೆ ಕರ್ತವ್ಯ ನಿರತ ಪ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ಹಣವನ್ನು ಪೊಲೀಸರ ವಶಕ್ಕೆ ನೀಡಿದ್ದರು.
ಹಣವನ್ನು ನೆಲಮಂಗಲ ಖಜಾನೆಯಲ್ಲಿ ಭದ್ರವಾಗಿ ಇಡಲಾಗಿತ್ತು. ಈಗ ಹಣದ ವಾರಸುದಾರರು ಸೂಕ್ತ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದು ದಾಖಲೆ ಪರಿಶೀಲಿಸಿ ಖಾತರಿಪಡಿಸಿಕೊಂಡ ಗ್ರಾಮಾಂತರ ಪೊಲೀಸರು ಮತ್ತಿಕೆರೆಯ ಎಕ್ಸೀಸ್ ಬ್ಯಾಂಕ್‌ನವರಿಗೆ ಹಣವನ್ನು ವಾಪಸ್ ನೀಡಿದರು.
ಚುನಾವಣೆ ಮುಗಿದ ಒಂದು ತಿಂಗಳು ಕಳೆದ ಮೇಲೆ ಹಣವನ್ನು ವಾಪಸ್ ಪಡೆದುಕೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಆಸ್ಪದವಾಗುತ್ತಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.