ಗೊಂದಲದ ನಡುವೆ ತಾಪಂ ಮಾಸಿಕ ಸಭೆ ಮುಂದೂಡಿಕೆ
ಕ.ಪ್ರ. ವಾರ್ತೆ ಕನಕಪುರ ಜೂ.13
ಕನಕಪುರ ತಾಲೂಕು ಪಂಚಾಯತ್ನ ಮಾಸಿಕ ಸಾಮಾನ್ಯ ಸಭೆ ತಾಪಂ ಅಧ್ಯಕ್ಷೆ ನಾಗರತ್ನಶಿವಮಲ್ಲಯ್ಯ ಅಧ್ಯಕ್ಷತೆಯಲ್ಲಿ ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆಯಿತು.
ತಾಪಂ ಕಾರ್ಯನಿರ್ವಹಣಾಧಿಕಾರಿ ಜಿ.ಜೆ.ನಾಯಕ್ ಕಲಾಪಗಳನ್ನು ನಿರ್ವಹಿಸಿದರು. ಸಭೆ ಪ್ರಾರಂಭವಾಗುತ್ತಿದ್ದಂತೆಯೇ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳಿಗೆ ಬಿಡುಗಡೆಯಾದ ಅನುದಾನದ ವಿವರಗಳನ್ನು ಕಳೆದ ಏಳು ತಿಂಗಳುಗಳಿಂದ ನೀಡದಿರುವ ಬಗ್ಗೆ ಉಪಾಧ್ಯಕ್ಷ ಬಿ.ಎಸ್.ರವಿಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಾಜಿ ತಾಪಂ ಅಧ್ಯಕ್ಷೆ ಸುಕನ್ಯಾ ರಂಗಸ್ವಾಮಿ, ಸುನಂದಾ ರಮೇಶ್ ಮೊದಲಾದ ಸದಸ್ಯರು ದನಿಗೂಡಿಸಿ ತಾಪಂ ಸಿಇಓ ಮಹಿಳಾ ಸದಸ್ಯರ ಬಗ್ಗೆ ಉಪೇಕ್ಷೆಯ ಭಾವನೆ ಹೊಂದಿದ್ದಾರೆ ಎಂದು ಆರೋಪಿಸಿದರು. ಸದಸ್ಯರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೆ ಸಭೆಯನ್ನು ಮುಂದುವರೆಸಲು ಯತ್ನಿಸಿದಾಗ ಸಭೆ ಗೊಂದಲದ ಗೂಡಾಯಿತು. ಉಪಾಧ್ಯಕ್ಷ ರವಿಕುಮಾರ್ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಕೊನೆಗೆ ತಾಪಂ ಅಧ್ಯಕ್ಷೆ ನಾಗರತ್ನ ಸದಸ್ಯರುಗಳಿಲ್ಲದೆ ಸಭೆ ನಡೆಸಲು ಸಾಧ್ಯವಿಲ್ಲ ಎಂದು ಸಭೆಯನ್ನು ಮುಂದೂಡಿ ಮುಂಬರುವ ಸಭೆಯೊಳಗಾಗಿ ಬಿಡುಗಡೆಯಾದ ಎಲ್ಲಾ ಅನುದಾನಗಳ ವಿವರಗಳನ್ನು ಸಭೆಗೆ ಹಾಗೂ ಸದಸ್ಯರಿಗೆ ತಿಳಿಸಬೇಕು ಎಂದು ಆದೇಶಿಸಿ ಸಭೆಯನ್ನು ಮುಂದೂಡಿದರು.