ವಿಜಯಾ ಬ್ಯಾಂಕ್ ದರೋಡೆಗೆ ವಿಫಲ ಯತ್ನ
ಕನಕಪುರ: ಕನಕಪುರದ ಹೃದಯಭಾಗದಲ್ಲಿನ ಚನ್ನಬಸಪ್ಪ ವೃತ್ತದಲ್ಲಿರುವ ರಾಷ್ಟ್ರೀಕೃತ ವಿಜಯಾ ಬ್ಯಾಂಕ್ನ ದರೋಡೆ ನಡೆಸಲು ಲೂಟಿಕೋರರು ವಿಫಲಯತ್ನ ನಡೆಸಿದ ಘಟನೆ ನಡೆದಿದೆ.
ಇಲ್ಲಿನ ಪೊಲೀಸ್ ಠಾಣೆಯಿಂದ ಕೂಗಳತೆಯ ದೂರದಲ್ಲಿರುವ ಬ್ಯಾಂಕನ್ನು ದರೋಡೆ ಮಾಡುವ ಸಲುವಾಗಿ ವ್ಯವಸ್ಥಿತವಾಗಿ ಸಜ್ಜಾಗಿದ್ದ ಗುಂಪೊಂದು ಗ್ಯಾಸ್ ಕಟ್ಟರ್, ಸಿಲಿಂಡರ್ಗಳನ್ನು ಬಳಸಿ ರೂರಲ್ ಕಾಲೇಜು ಮೈದಾನದ ಕಡೆಯಿಂದ ಒಳನುಸುಳಿ ನೂತನವಾಗಿ ನಿರ್ಮಿಸುತ್ತಿರುವ ಕಟ್ಟಡದ ಪಕ್ಕದಿಂದ ಬ್ಯಾಂಕ್ನ ಗಾಜುಗಳನ್ನು ಪುಡಿಮಾಡಿ ಕಬ್ಬಿಣದ ಸರಳುಗಳನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಿ ಒಳನುಗ್ಗಿದ್ದಾರೆ.
ಪರಾರಿ: ವಿಜಯಾ ಬ್ಯಾಂಕ್ನ ಒಳಭಾಗದಲ್ಲಿ ಅಳವಡಿಸಿರುವ ಸಿಸಿಟಿವಿ, ಸೈರನ್ ಹಾಗೂ ಮಾಹಿತಿ ನೀಡುವ ಆಟೋಡಯಲರ್ ವ್ಯವಸ್ಥೆಯನ್ನು ಛಿದ್ರಗೊಳಿಸಿ ವಿದ್ಯುತ್ವೈರ್ಗಳನ್ನು ಕತ್ತರಿಸಿ ಭದ್ರತಾ ಕಪಾಟನ್ನು ಕೊರೆಯುವ ಸನ್ನಾಹ ನಡೆಸಿದ್ದಾರೆ. ಪ್ರಯತ್ನ ವಿಫಲವಾಗಿ ದರೋಡೆಗೆ ತಂದಿದ್ದ ಗ್ಯಾಸ್ಕಟ್ಟರ್ ಹಾಗೂ ಎಂ.ವಿ.ಆರ್. ಏಜೆನ್ಸಿಯ ಗ್ಯಾಸ್ ಸಿಲಿಂಡರ್ಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ಎಂದಿನಂತೆ ವ್ಯವಹರಿಸಲು ಬ್ಯಾಂಕ್ ಬಾಗಿಲನ್ನು ಸಿಬ್ಬಂದಿ ತೆರೆಯುತ್ತಿದ್ದಂತೆ ದರೋಡೆಯ ಯತ್ನ ತಿಳಿದು ಬಂದಿದ್ದು, ವಾಹಿವಾಟು ನಡೆಸದೆ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದ್ದಾರೆ. ವಿಜಯಾ ಬ್ಯಾಂಕ್ನ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬ್ಯಾಂಕ್ ಅನ್ನು ಪೂರ್ಣ ಭದ್ರತೆಯಿರುವ ನೂತನ ಕಟ್ಟಡಕ್ಕೆ ಶೀಘ್ರದಲ್ಲಿಯೇ ವರ್ಗಾಯಿಸುವುದಾಗಿ ತಿಳಿಸಿದ್ದಾರೆ. ಆರಕ್ಷಕ ಉಪನಿರೀಕ್ಷಕ ಅಶೋಕ್, ಅಪರಾಧ ಉಪನಿರೀಕ್ಷಕ ಗಣೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇತ್ತೀಚೆಗೆ ನಗರದ ಸಿಂಡಿಕೇಟ್ ಬ್ಯಾಂಕ್ನಲ್ಲಿಯೂ ಕೂಡಾ ದರೋಡೆ ಯತ್ನ ನಡೆದಿದ್ದು ರಾಷ್ಟ್ರೀಕೃತ ಬ್ಯಾಂಕ್ಗಳನ್ನೇ ಗುರಿಯಾಗಿರಿಸಿಕೊಂಡ ನುರಿತ ತಂಡವೊಂದು ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುಮಾನಿಯಿದೆ. ವಿಜಯಾ ಬ್ಯಾಂಕ್ನಲ್ಲಿಯೂ ಕೂಡಾ ಕೆಲವು ತಿಂಗಳ ಹಿಂದೆ ಪೊಲೀಸರು ಭದ್ರತಾ ವ್ಯವಸ್ಥೆ ಬಗ್ಗೆ ಕಟ್ಟುನಿಟ್ಟಿನ ಕಾರ್ಯಸೂಚಿಗಳನ್ನು ನೀಡಿದ್ದರೂ, ಅದನ್ನು ಪಾಲಿಸದ ಬ್ಯಾಂಕ್ನ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ಪೊಲೀಸರು ಅಭಿಪ್ರಾಯ ಪಡುತ್ತಾರೆ. ರಾತ್ರಿ ಪಾಳಿಯ ಕಾವಲುಗಾರರು ಇಲ್ಲದಿರುವುದೂ ಲೋಪಕ್ಕೆ ಕಾರಣವಾಗಿದೆ.