ಕಾಮಗಾರಿಗಳ ಗುಣಮಟ್ಟ ಕಾಯ್ದಕೊಳ್ಳಿ: ಪಿಳ್ಳಮುನಿಶಾಮಪ್ಪ
ವಿಜಯಪುರ: ಸರ್ಕಾರದ ಅನುದಾನದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟ ಕಂಡು ಬಂದಲ್ಲಿ ಅದನ್ನು ಪ್ರಶ್ನಿಸುವ ಹಕ್ಕು ಜನಸಾಮಾನ್ಯರಿಗೆ ಇದೆ ಎಂದು ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.ಅವರು ಪಟ್ಟಣದ 2ನೇ ವಾರ್ಡಿನಲ್ಲಿ 11.09ಕೋಟಿ ರು.ಗಳ ವೆಚ್ಚದಲ್ಲಿ ಕೊಳವೆಬಾವಿ ಆಧಾರಿತ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಯಾವುದೇ ಕಾಮಗಾರಿಗಳಿಗೆ ಎಂಜಿನಿಯರ್ಗಳಿಗಾಗಲಿ, ಗುತ್ತಿಗೆದಾರರಿಗಾಗಲಿ ಲಂಚ ನೀಡ ಬೇಕಾಗಿಲ್ಲ ಎಂದು ಕಿವಿ ಮಾತು ಹೇಳಿದರು. ಕಾರ್ಯಪಾಲಕ ಎಂಜಿನಿಯರ್ ಕೇಶವ ಮಾತನಾಡಿ ಈ ಕಾಮಗಾರಿಗೆ ಕೇಂದ್ರ ಸರ್ಕಾರದ ಯೋಜನೆಯಡಿ 2008ರಲ್ಲಿ ಅನುಮೋದನೆ ದೊರೆತಿದೆ. ಉಪಗ್ರಹದ ಮೂಲಕ ಸರ್ವೆ ನಡೆದಿದ್ದು, ನೀರಿನ ಮೂಲಗಳನ್ನು ಪತ್ತೆ ಹಚ್ಚಲಾಗಿದೆ. ನೀರು ಸರಬರಾಜು ಮಾಡುವ ಸಿವಿಲ್ ಕಾಮಗಾರಿಗಳಿಗೆ 6.48ಕೋಟಿ ರು.ಹಾಗೂ ವಿದ್ಯುತ್ ಕಾಮಗಾರಿಗೆ 2.93 ಲಕ್ಷ ರು. ಗಳ ಟೆಂಡರ್ ಕರೆದು ಗುತ್ತಿದಾರರನ್ನು ನೇಮಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಬೂದಿಹಾಳ್ ಮುನಿಶ್ಯಾಮಗೌಡ, ಟೌನ್ ಅಧ್ಯಕ್ಷ ನಾರಾಯಣಸ್ವಾಮಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವೀರಭದ್ರಯ್ಯ, ತಾ.ಪಂ.ಮಾಜಿ ಅಧ್ಯಕ್ಷ ನಾರಾಯಣಚಾರಿ, ಪುರಸಭಾ ಮುಖ್ಯಾಧಿಕಾರಿ ಮುನಿಸ್ವಾಮಿ, ಪುರಸಭಾ ಸದಸ್ಯರಾದ ಎಂ.ಸತೀಶ್ ಕುಮಾರ್, ಭಾಸ್ಕರ್, ಕೇಶವಪ್ಪ, ವರದರಾಜು, ನಿಸ್ಸಾರ್, ಬಲಮುರಿ ಶ್ರೀನಿವಾಸ್, ನಾಗರಾಜ್, ಮಹೇಶ್ ಮಾಜಿ ಸದಸ್ಯ ಚಿನ್ನಯ್ಯ, ಭಾರತ ಜನಜಾಗೃತಿ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಶ್ವತ್ಥಪ್ಪ, ಪುರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು. ರಾಜ್ಯ ರಿಮೋಟ್ ಅಪ್ಲಿಕೇಶನ್ ಸೆಂಟರ್ನ ಸಮೀಕ್ಷೆಯಂತೆ ಪಟ್ಟಣದ ಸುತ್ತಮುತ್ತಲಿರುವ ವೆಂಕಟಾಪುರ ಕೆರೆ ವಿಭಾಗವನ್ನು ಎ ವಲಯ, ಶೆಟ್ಟಿಹಳ್ಳಿ ಕೆರೆಯನ್ನು ಬಿ ವಲಯ, ಚಿಕ್ಕನಹಳ್ಳಿ ಕೆರೆ ವಿಭಾಗವನ್ನು ಸಿ ವಲಯ ಎಂದು ವಿಂಗಡಿಸಲಾಗಿದೆ. ಈ ಮೂರು ಭಾಗಗಳಲ್ಲಿ 61 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು ಅದರಲ್ಲಿ 47 ಕೊಳವೆ ಬಾವಿಗಳಲ್ಲಿ ಒಳ್ಳೆಯ ನೀರಿನ ಸೆಲೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.