ಗ್ರಾಹಕರ ಸೋಗಲ್ಲಿ ಬಂದು ಸರ ಅಪಹರಣ
ರಾಮನಗರ: ಗ್ರಾಹಕನ ಸೋಗಿನಲ್ಲಿ ಸೈಬರ್ ಸೆಂಟರ್ವೊಂದಕ್ಕೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅಂಗಡಿಯಲ್ಲಿದ್ದ ಮಹಿಳೆಯ 1 ಲಕ್ಷ ಬೆಲೆ ಬಾಳುವ ಮಾಂಗಲ್ಯ ಸರ ದೋಚಿ ಪರಾರಿಯಾಗಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಗೇರಿಯ ಜಯಶ್ರೀ ಸರ ಕಳೆದುಕೊಂಡವರು. ಇವರು ಚಿಕ್ಕಬಸ್ತಿಯಲ್ಲಿರುವ ಮಂಜುನಾಥ ಕಮ್ಯುನಿಕೇಶನ್ ಮತ್ತು ಸೈಬರ್ ಸೆಂಟರ್ನಲ್ಲಿದ್ದಾಗ ಚಾಕಲೇಟ್ ಖರೀದಿಸುವ ನೆಪದಲ್ಲಿ ಬಂದ ವ್ಯಕ್ತಿ ಜಯಶ್ರೀ ಅವರ ಕುತ್ತಿಗೆಯಲ್ಲಿದ್ದ 50 ಗ್ರಾಂ. ಚಿನ್ನದ ಸರವನ್ನು ಕಸಿದುಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾನೆ. ಈ ಸಂಬಂಧ ಕುಂಬಳಗೋಡು ಠಾಣೆಯಲ್ಲಿ ದೂರು ದಾಖಲಾಗಿದೆ.
ಇಂದು ವಿದ್ಯುತ್ ವ್ಯತ್ಯಯ
ರಾಮನಗರ: ಚನ್ನಪಟ್ಟಣ ನಗರ ಉಪ ವಿಭಾಗ ವ್ಯಾಪ್ತಿಗೊಳಪಡುವ ಹೊಂಗನೂರು ಗ್ರಾಮದಲ್ಲಿ ಜೂ.15ರಂದು ರಿಪೇರಿ ಕೆಲಸ ಇರುವುದರಿಂದ ಅಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಎಂದಿನಂತೆ ಸಹಕರಿಸಬೇಕೆಂದು ಬೆಸ್ಕಾಂನ ಚನ್ನಪಟ್ಟಣ ನಗರ ಉಪ ವಿಭಾಗ ಎಇಇ ತಿಳಿಸಿದ್ದಾರೆ.