ನೂತನ ಕಾರ್ಮಿಕ ನೀತಿ ಜಾರಿಗೆ ಆಗ್ರಹಿಸಿ ಸಿಐಟಿಯು ಧರಣಿ
ಆನೇಕಲ್ಲು: ನೂತನ ಸರ್ಕಾರ ಹಿಂದಿನ ಸರ್ಕಾರದ ಎಲ್ಲ ನೀತಿಗಳನ್ನು ಬದಿಗಿಟ್ಟು ಕಾರ್ಮಿಕರ ಕಲ್ಯಾಣಕ್ಕಾಗಿ ಹೊಸ ನೀತಿ ಜಾರಿಗೆ ತರಲಿ ಎಂದು ಸಿಐಟಿಯು ಮುಖಂಡ ಡಿ. ಮಹದೇಶ್ ಒತ್ತಾಯಿಸಿದರು.
ಅವರು ಆನೇಕಲ್ ಘಟಕ ವತಿಯಿಂದ ಏರ್ಪಡಿಸಿದ್ದ ಪ್ರಚಾರಾಂದೋಲನ, ಧರಣಿ ಹಾಗೂ ಮುಷ್ಕರದಲ್ಲಿ ಪಾಲ್ಗೊಂಡ ನೂರಾರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಕಾರ್ಮಿಕ ಸಂಘಟನೆಗಳು ಕಳೆದ ಮಾರ್ಚ್ನಲ್ಲಿ ಐತಿಹಾಸಿಕ 48 ಗಂಟೆ ಮುಷ್ಕರ ನಡೆಸಿ ಕಾರ್ಮಿಕ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಸಮಾಲೋಚನೆ ನಡೆಸಿದ್ದೇವೆ. ವಿವಿಧ ಸಚಿವರ ತಂಡ ಕಾರ್ಮಿಕ ಸಮಸ್ಯೆಗಳ ಬಗ್ಗೆ ಕೂಲಂಕಷ ವರದಿ ನೀಡಿದೆ. ಪ್ರಧಾನಿಯವರು ಕೆಲ ಬೇಡಿಕೆ ಈಡೇರಿಕೆಗೆ ಸಮ್ಮತಿ ನೀಡಿದ್ದಾರೆ.
ರಾಜ್ಯ ಸರ್ಕಾರ ಅಸಂಘಟಿತ ಕೂಲಿ ಕಾರ್ಮಿಕರು, ಕೌಶಲ್ಯವಂತ ಕಾರ್ಮಿಕರು ಅರೆ ಕುಶಲ ಕಾರ್ಮಿಕರ ದುಡಿಮೆಗೆ ತಕ್ಕ ವೇತನ ಜಾರಿಗೊಳಿಸಬೇಕು. ವಸತಿ ಹೀನ ಕಾರ್ಮಿಕರಿಗೆ ನಿವೇಶನ ನೀಡಬೇಕು. ರಾಷ್ಟ್ರೀಯ ಬಿಮಾ ಯೋಜನೆ ಜಾರಿಯಾಗಬೇಕು. ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿದರು. ವಕೀಲ ಬಿ.ಎನ್. ಮಂಜುನಾಥ್ ಧರಣಿ ನೇತೃತ್ವ ವಹಿಸಿದ್ದರು.