ಬಸ್‌ಪಾಸ್‌ಗಾಗಿ ವಿದ್ಯಾರ್ಥಿಗಳ ಪರದಾಟ
ನೆಲಮಂಗಲ: ಸರ್ಕಾರ ನೀಡುತ್ತಿರುವ ರಿಯಾಯಿತಿ ದರದ ಸರ್ಕಾರಿ ಬಸ್‌ಪಾಸ್ ಪಡೆದುಕೊಳ್ಳುವುದಕ್ಕೆ ತಾಲೂಕಿನಲ್ಲಿ ಕೆಲವು ವಿದ್ಯಾರ್ಥಿಗಳು ಪರದಾಡುತ್ತಿರುವ ಸ್ಥಿತಿ ಒದಗಿದೆ.
ತಾಲೂಕು ಕೇಂದ್ರವಾಗಿರುವ ನೆಲಮಂಗಲದಿಂದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಿಂದ ಹಾಗೂ ಪ್ರತಿದಿನ ಬೆಂಗಳೂರು ಮತ್ತು ತುಮಕೂರು ನಗರದ ನಾನಾ ಶಾಲಾ ಕಾಲೇಜಿಗೆ ಹೋಗಲು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಪಾಸ್ ಪಡೆದುಕೊಳ್ಳಲು ಕಳೆದ 15 ದಿನಗಳಿಂದಲೂ ಹರ ಸಾಹಸ ಪಡುತ್ತಿದ್ದಾರೆ.
ಒಂದೇ ಕೌಂಟರ್: ಇದಕ್ಕೆಲ್ಲಾ ಮೂಲ ಕಾರಣ ನೆಲಮಂಗಲ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕ ಪ್ರಯಾಣಿಕರು ಹಾಗೂ ಸರ್ಕಾರಿ ಖಾಸಗಿ ನೌಕರರಿಗೆ ಸೇರಿ ಇರುವುದು ಒಂದೇ ಪಾಸ್ ಕೌಂಟರ್, ಇಲ್ಲಿ ಒಬ್ಬನೇ ವ್ಯಕ್ತಿ ಪ್ರತಿ ದಿನ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಇತರರಿಗೆ ಪಾಸ್ ವಿತರಿಸಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಬೇಕು ನಂತರ ಪಾಸ್ ಬರೆದು ಕೊಡಬೇಕು ಈ ಹಂತದಲ್ಲಿ ಒಂದು ಪಾಸ್ ನೀಡಲು ಕನಿಷ್ಠ 5 ನಿಮಿಷ ಬೇಕಾಗುತ್ತದೆ.
ಈ ಸಾಲಿನ ಕೊನೆಯಲ್ಲಿ ನಿಂತವರಿಗೆ ದಿನದ ಕೊನೆಗೆ ಪಾಸ್ ತೆಗೆದುಕೊಳ್ಳುವಲ್ಲಿ ಕಷ್ಟವಾಗಿ ಬರಿಕೈಯಲ್ಲಿ ಮರಳಬೇಕಾಗುತ್ತದೆ. ಕಾರಣ ಆ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿರುತ್ತಾರೆ ಅವರು ತಮ್ಮ ಸ್ವಗ್ರಾಮಕ್ಕೆ ಹೋಗಬೇಕಾದ ಬಸ್ ಹೊರಟಿರುತ್ತದೆ ವಿಧಿಯಿಲ್ಲದೆ ವಿದ್ಯಾರ್ಥಿ ಬಸ್ ಹತ್ತಿ ಮನೆಗೆ ತೆರಳಬೇಕಾಗುತ್ತದೆ.
ಪಾಸು ಪಡೆದುಕೊಳ್ಳುವಲ್ಲಿನ ಈ ಅವ್ಯವಸ್ಥೆಯ ಸ್ಥಿತಿಗೆ ಸಾರಿಗೆ ಅಧಿಕಾರಿಗಳ ಧೋರಣೆಯೇ ಕಾರಣವಾಗಿದೆ ಎಂದು ನೂರಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಲ್ಲಿನ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸುತ್ತಾರೆ.
ಸಾಲು ಮಾಮೂಲು: ನೆಲಮಂಗಲದಿಂದ ಪ್ರತಿ ದಿನ ಸುಮಾರು ಐದಾರು ಸಾವಿರ ವಿದ್ಯಾರ್ಥಿಗಳು ಬೆಂಗಳೂರು ಮತ್ತು ತುಮಕೂರಿನ ವಿವಿಧ ಶಾಲಾ ಕಾಲೇಜುಗಳಿಗೆ ವ್ಯಾಸಂಗಕ್ಕೆ ಪ್ರಯಾಣಿಸುತ್ತಾರೆ. ಇವರಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಬಿ.ಎಂ.ಟಿ.ಸಿ ಪಾಸ್ ಬಳಸುತ್ತಾರೆ. ನೆಲಮಂಗಲದಲ್ಲಿಯೂ ಪಾಸ್ ಪಡೆದುಕೊಳ್ಳಲು ಬಿ.ಎಂ.ಟಿ.ಸಿ ಪಾಸ್‌ಗಾಗಿಯೇ ಹೆಚ್ಚು ಬೇಡಿಕೆ ಇರುವುದು ಆದ್ದರಿಂದ ಉದ್ದದ ಸರತಿಯ ಸಾಲು ಕಂಡು ಬರುತ್ತಿದೆ.