ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೆಲೆ ಏರಿಕೆ ನಿಯಂತ್ರಿಸಿ, ಪಡಿತರ ವಿತರಿಸಿ

Rashmi Kasaragodu
Updated On : 15 Jun 2013, 12:08 pm

ಕ.ಪ್ರ.ವಾರ್ತೆ ಟಿ ದೊಡ್ಡಬಳ್ಳಾಪುರ  ಟಿ ಜೂ.14
ಬೆಲೆ ಏರಿಕೆ ನಿಯಂತ್ರಿಸಿ ಎಲ್ಲಾ ಕುಟುಂಬಗಳಿಗೆ ಪಡಿತರ ವ್ಯವಸ್ಥೆ ಕಲ್ಪಿಸುವ ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸಬೇಕು. ಉದ್ಯೋಗ ಸೃಷ್ಟಿಸಲು ಮತ್ತು ರಕ್ಷಿಸಲು ಪ್ಯಾಕೇಜ್ ನೀಡಬೇಕು ಎಂದು ಸಿಐಟಿಯು ತಾಲೂಕು ಮುಖಂಡರು
ಆಗ್ರಹಿಸಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ತಾಲೂಕು ಘಟಕದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಇಲ್ಲಿನ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಲವಾರು ಮುಖಂಡರು, ವಸತಿಹೀನ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ವಸತಿ ಕಲ್ಪಿಸಿ ಮನೆ ಬಾಡಿಗೆ ದರ ನಿಯಂತ್ರಿಸಬೇಕು. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಮನೆ ಕೆಲಸಗಾರರನ್ನು ಬೀದಿಬದಿ ವ್ಯಾಪಾರಿಗಳು ಇತರರಿಗೆ ಕೂಡಲೇ ಯೋಜನೆ ಜಾರಿಗೊಳಿಸಿ ಕಾರ್ಮಿಕ ಇಲಾಖೆ ಮೂಲಕ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
45ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಸರ್ಕಾರದ ವಿವಿಧ ಯೋಜನಗಳಡಿ ದುಡಿಯುತ್ತಿರುವ ಅಂಗನವಾಡಿ ನೌಕರರು, ಆಶಾ ನೌಕರರು, ಕಂಪ್ಯೂಟರ್ ಆಪರೇಟರ್‌ಗಳು, ಬಿಸಿಯೂಟ ನೌಕರರು, ಆರೋಗ್ಯ ಕವಚ ಸಿಬ್ಬಂದಿ ಮತ್ತಿತರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು.
ಸಾರ್ವತ್ರಿಕವಾಗಿ ಎಲ್ಲ ಕಾರ್ಮಿಕರಿಗೂ ಸಾಮಾಜಿಕ ಭದ್ರತಒದಗಿಸಲು ಹಣಕಾಸು ಸಂಪನ್ಮೂಲ ಒದಗಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು.
ಕೈಗಾರಿಕಾ ಕಾರ್ಮಿಕರ ನಿವೃತ್ತಿ ವಯಸ್ಸನ್ನು 58ರಿಂದ 60ಕ್ಕೆ ಹೆಚ್ಚಿಸುವ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಿ ಪ್ರಕಟಿಸಬೇಕು. ಲಾಭದಾಯಕ ಸಾರ್ವಜನಿಕ ಉದ್ದಿಮೆಗಳ ಷೇರು ಮಾರಾಟ ಮಾಡದಿರಲು ಹಾಗೂ ಖಾಸಗೀಕರಣ ನಿಲ್ಲಿಸಿ. ಬಿಕ್ಕಟ್ಟಿನ ನೆಪದಲ್ಲಿ ಕೆಲಸ ಕಳೆದುಕೊಳ್ಳುವ ಕಾರ್ಮಿಕರ ಉದ್ಯೋಗ ರಕ್ಷಿಸಲು ಪ್ಯಾಕೇಜ್ ರೂಪಿಸಬೇಕು. ವೇತನ ಪಾವತಿ ಕಾಯ್ದೆಯಡಿ ವ್ಯಾಜ್ಯಗಳಲ್ಲಿ ಮಾಲೀಕರ ಮೇಲೆ ಹೊರಡಿಸಿರುವ ಸಮನ್ಸ್-ವಾರಂಟ್‌ಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದರು.
ಶಾಶ್ವತ ನೀರಾವರಿಗೆ ಆಗ್ರಹ: ಬೆಂ.ಗ್ರಾ.ಜಿಲ್ಲೆ ಸೇರಿದಂತೆ ಮಧ್ಯ ಕರ್ನಾಟಕದ 7 ಜಿಲ್ಲೆಗಳಿಗೆ ಪರಮಶಿವಯ್ಯ ವರದಿ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಎಲ್ಲ ಹಂತದ ಕಾರ್ಮಿಕರಿಗೂ ನಿವೃತ್ತ ವೇತನ ನೀಡಬೇಕು. ಬಿಎಂಆರ್‌ಡಿಎ ವ್ಯಾಪ್ತಿಯ ಅಕುಶಲ ಕಾರ್ಮಿಕರಿಗೆ ಕನಿಷ್ಠ 15 ಸಾವಿರ, ಅರೆಕುಶಲ ಕಾರ್ಮಿಕರಿಗೆ 16,500, ಕುಶಲ ಕಾರ್ಮಿಕರಿಗೆ 18,150, ಅತಿಕುಶಲ ಕಾರ್ಮಿಕಗಳಿಗೆ 19,965 ಕನಿಷ್ಠ ವೇತನ ನೀಡಬೇಕು. ಕಾಯಂ ಮತ್ತು ನಿರಂತರ ಸ್ವರೂಪದ ಕೆಲಸಗಳನ್ನು ಗುತ್ತಿಗೆ ನೀಡದಂತೆ ಎಚ್ಚರಿಕೆ ವಹಿಸಬೇಕು. ಸಂಘಟಿತ-ಅಸಂಘಟಿತ ಕಾರ್ಮಿಕರಿಗೆ ಖಾತ್ರಿ ಪಿಂಚಣಿ, ಸಾಮಾಜಿಕ ಭದ್ರತಾ ನಿಧಿ ಸ್ಥಾಪಿಸಬೇಕು. ಸಂಘ ರಚಿಸುವ ಸ್ವತಂತ್ರದ ಹಕ್ಕು, ಸಾಮಾಹಿಕ ಚೌಕಾಸಿಯ ಹಕ್ಕಿನ ಒಡಂಬಡಿಕೆಯನ್ನು ಸಂಸತ್ತು ಅನುಮೋದಿಸಬೇಕು. 45 ದಿನಗಳ ಒಳಗೆ ಕಾರ್ಮಿಕ ಸಂಘಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆ ನಂತರ ತಹಸೀಲ್ದಾರ್‌ಗೆ ಮನವಿ ಪತ್ರ ನೀಡಲಾಯಿತು. ಸಿಐಟಿಯು ಕಾರ್ಯದರ್ಶಿ .ವೆಂಕಟೇಶ್, ಖಜಾಂಚಿ ನಳಿನಾಕ್ಷಿ, ಅಂಗನವಾಡಿ ಕಾರ್ಯಕರ್ತರು, ಆಟೋ ಚಾಲಕರು ಭಾಗವಹಿಸಿದ್ದರು.



ನೆಲಮಂಗಲದಲ್ಲೂ ಸಿಐಟಿಯು ಪ್ರತಿಭಟನೆ
ನೆಲಮಂಗಲ: ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ
ಇಲ್ಲಿನ ತಾಲೂಕು ಕಚೇರಿ ಎದುರು ಸಿಐಟಿಯು ಕಾರ್ಯಕರ್ತರು ಪ್ರತಿಭಟನೆ ಶುಕ್ರವಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡರು, ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಯಲ್ಲಿ ಸೇವಾ ಹಿರಿತನ ಪರಿಗಣಿಸುವ ವಿಧಾನ ಜಾರಿಗೊಳಿಸಬೇಕು. ರಾಜ್ಯ ಮಟ್ಟದಲ್ಲಿ ಕಾರ್ಮಿಕರ ಸಮಸ್ಯೆ ಕುರಿತು ಚರ್ಚಿಸಲು ಕಾರ್ಮಿಕ ಸಮ್ಮೇಳನ ನಡೆಸಬೇಕು. ಸರ್ಕಾರವು ವಿವಿಧ ಸಮಿತಿಗಳನ್ನು ರಚಿಸುವಾಗ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡು ರಚನೆ ಮಾಡುವಂತೆ ಒತ್ತಾಯಿಸಿದರು. ಪ್ರತಿಭಟನೆ ನಂತರ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಡಿ.ರಾಜೇಂದ್ರ ಅವರಿಗೆ ಸಲ್ಲಿಸಲಾಯಿತು. ಸಿಐಟಿಯು ಮುಖಂಡರಾದ ತಿರುಮಲಾಚಾರಿ, ಆನಂದ, ಕುಮಾರ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement