ಆಸ್ತಿಗಾಗಿ ತಾತನ ಕೊಲೆ
ಹೊಸಕೋಟೆ: ಆಸ್ತಿ ಪಡೆಯುವ ದುರುದ್ದೇಶದಿಂದ ಸ್ವಂತ ತಾತನನ್ನೇ ಕೊಲೆಗೈದ ಘಟನೆ ತಾಲೂಕಿನ ಕಣ್ಣೂರಹಳ್ಳಿಯಲ್ಲಿ ನಡೆದಿದೆ. ಕಣ್ಣೂರಳ್ಳಿಯ ವಾಸಿ ಅಣ್ಣಯ್ಯಪ್ಪ (75) ಕೊಲೆಯಾದ ವ್ಯಕ್ತಿ. ಆತನಿಗೆ ಗಂಡು, ಮೂವರು ಹೆಣ್ಣು ಮಕ್ಕಳಿದ್ದು ಎಲ್ಲರೂ ಬೇರೆ ವಾಸ ಮಾಡುತ್ತಿದ್ದಾರೆ. ಅಣ್ಣಯ್ಯಪ್ಪ ಮಾತ್ರ ಒಂಟಿಯಾಗಿ ವಾಸಿಸುತ್ತಿದ್ದನು. ಹೆಣ್ಣು ಮಗಳ ಒಬ್ಬ ಮಗನಿಗೆ ತನ್ನ ಎಲ್ಲಾ ಆಸ್ತಿಯನ್ನು ನೀಡಲು ಉದೇಶಿಸಿದ್ದ ಎಂಬುದನ್ನು ಅರಿತ ಗ್ರಾಮದಲ್ಲೆ ವಾಸ ಮಾಡುತ್ತಿದ್ದ ಮಗ ಕೃಷ್ಣಪ್ಪನ ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ಮಕ್ಕಳು ಸೇರಿ ಪಿತೂರಿ ನಡೆಸಿ 2013ರ ಮಾ.28ರಂದು ಅಣ್ಣಯ್ಯಪ್ಪನ ಮೇಲೆ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದರು. ನಂತರ ಅಮಾಯಕರಂತೆ ನಟಿಸಿ ತಮ್ಮ ತಾತನನ್ನು ನಿಗೂಢವಾಗಿ ಹತ್ಯೆ ಮಾಡಲಾಗಿದೆ ಎಂದು ಹೊಸಕೋಟೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆ ಸಂದರ್ಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಕೃಷ್ಣಪ್ಪನ ಮಗ ಕುಮಾರ್ ಅಂಬೇಡ್ಕರ್(26) ದೊಮ್ಮಸಂದ್ರದಲ್ಲಿರುವ ಮೃತನ ಮೊಮ್ಮಗ ನಾಗರಾಜ್ (32) ಎಂಬುವರನ್ನು ಬಂಧಿಸಿದ್ದು ಕೃತ್ಯದಲ್ಲಿ ಭಾಗಿಗಳಾಗಿ ತಲೆಮರೆಸಿಕೊಂಡಿರುವ ಇನ್ನೂ ಇಬ್ಬರಿಗಾಗಿ ತೀವ್ರ ಶೋಧ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.