ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾಹಿತಿ ಹಕ್ಕು ಮೂಲಕ ಅಧಿಕಾರಿಗಳಿಗೆ ಬ್ಲ್ಯಾಕ್ಮೇಲ್

Rashmi Kasaragodu
Updated On : 16 Jun 2013, 12:56 pm

ಕ.ಪ್ರ. ವಾರ್ತೆ, ದೊಡ್ಡಬಳ್ಳಾಪುರ, ಜೂ.15
ಈತ ಒಬ್ಬ ಡಿಫರೆಂಟ್ ದಂಧೆಕೋರ. ಆತನಿಗೆ ಮಾಡೋಕೆ ನಿರ್ದಿಷ್ಟ ಕೆಲಸವೇನೂ ಇಲ್ಲ. ಆದರೂ ಸದಾ ಕಾಲ ಓಡಾಡುವುದು ಕಾರಿನಲ್ಲಿ. ಆ ಕಾರಿಗೆ ವಿಧಾನಸೌಧದ ಆವರಣ ಪ್ರವೇಶ ಪರವಾನಗಿ ಬೇರೆ.
 ಅಷ್ಟಕ್ಕೂ ಆತ ಪತ್ರಕರ್ತನಂತೆ. ಹೆಸರು ಕೆ.ಎಸ್.ಗಂಗರಾಜು. ಈತ ಈಗ ಮಾಹಿತಿ ಹಕ್ಕು ಅಧಿನಿಯಮವನ್ನೇ ತನ್ನ ಬಂಡವಾಳ ಮಾಡಿಕೊಂಡು ಕೆಲಸಕ್ಕಾಗಿ ಅಧಿಕಾರಿಗಳನ್ನು ಬ್ಲಾಕ್ಮೇಲ್ ಮಾಡಿ ಅಧಿಕಾರಿಗಳಿಂದಲೇ ದಿಗ್ಭಂದನಕ್ಕೊಳಗಾದ ಘಟನೆ ಶನಿವಾರ ಸಂಜೆ ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದಿದೆ.
 ಈತ ಕೇಳಿದ ಮಾಹಿತಿ ಕೊಡಲು ಅಧಿಕಾರಿಗಳು ಹರಸಾಹಸ ಪಟ್ಟು ಸಮಗ್ರ ಕಡತಗಳನ್ನು ಈತನ ಮುಂದಿಟ್ಟು, ಬೇಕಿರುವ ಮಾಹಿತಿ ದಾಖಲೆಗಳನ್ನು ಆಯ್ಕೆ ಮಾಡಿಕೊಟ್ಟರೆ ನಕಲು ಪ್ರತಿ ಕೊಡುವುದಾಗಿ ಹೇಳಿದ್ದಾರೆ. ಆದರೆ ಈತ ಅಧಿಕಾರಿಗಳ ಬಳಿ ಉಲ್ಟಾ ಹೊಡೆದಿದ್ದಾನೆ. ನನಗೆ ಕೆಲಸ ಕೊಡಿಸಿ. ನನಗೆ ಯಾವುದೇ ಮಾಹಿತಿ ಬೇಡ ಎಂದು ಹೇಳಿ ಅಧಿಕಾರಿಗಳನ್ನು ದಂಗಾಗಿಸಿದ್ದಾನೆ. ಮೂಲತಃ ಬೆಂಗಳೂರಿಗನಾದ ಈತ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮಾಹಿತಿ ಕೇಳಿದ್ದಾದರೂ ಏಕೆ ಎಂಬ ಪ್ರಶ್ನೆಗೆ ಅವನ ಸಿದ್ಧ ಉತ್ತರ, ಯಾರೋ ಹೇಳಿದ್ರು, ಮಾಹಿತಿ ಹಕ್ಕು ಅರ್ಜಿ ಹಾಕಿ ಅಧಿಕಾರಿಗಳನ್ನು ಹೆದರಿಸಿದ್ರೆ ಕೆಲಸ ಕೊಡಿಸ್ತಾರೆ ಅಂತ... ಎಂದು ಹೇಳುತ್ತಾನೆ. ಈ ಮಾಹಿತಿ ಹಕ್ಕು ಭೂಪ ಶನಿವಾರ ಸಂಜೆ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ದಿಗ್ಭಂಧನಕ್ಕೊಳಗಾಗಿದ್ದ. ಸಾರ್ವಜನಿಕರು, ಅಧಿಕಾರಿಗಳು, ಗುತ್ತಿಗೆದಾರರು ಸೇರಿ ಆತನಿಗೆ ಛೀಮಾರಿ ಹಾಕಿದ ಘಟನೆಯೂ ನಡೆದಿದೆ.
ಆದದ್ದೇನು: ಬೆಂಗಳೂರಿನ ಮಾಗಡಿ ರಸ್ತೆಯ ಸುಂಕದಕಟ್ಟೆಯ ವಿಳಾಸದಲ್ಲಿದೆ ಎನ್ನಲಾಗಿರುವ  ಕರುನಾಡ ಸೈನಿಕ  ಎಂಬ ಮಾಸಪತ್ರಿಕೆ ಹೆಸರಿನಲ್ಲಿ ಈತ ಕಳೆದ ಫೆಬ್ರವರಿ 20ರಂದು ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿಯ ಎಂಜಿನಿಯರಿಂಗ್ ವಿಭಾಗಕ್ಕೆ ಮಾಹಿತಿ ಹಕ್ಕು ಅಧಿನಿಯಮದಡಿ ಬರೋಬ್ಬರಿ 16 ಅರ್ಜಿಗಳನ್ನು ಗುಜರಾಯಿಸಿದ್ದಾನೆ. ಕೇಳಿರೋದು ಇಡೀ 3 ವರ್ಷದ ಎಲ್ಲ ಕಾಮಗಾರಿಗಳ ಸಮಗ್ರ ಮಾಹಿತಿ. ಕಾಮಗಾರಿಗಳ ಅಂದಾಜು ಪಟ್ಟಿ, ಕಾರ್ಯಾದೇಶ, ಕಾಮಗಾರಿ ನಕ್ಷೆ, 3ನೇ ವ್ಯಕ್ತಿ ಪರಿಶೀಲನಾ ವರದಿ, ಗುಣಮಟ್ಟ ಪರೀಕ್ಷಾ ವರದಿ, ಕಾಮಗಾರಿಯ 3 ಹಂತಗಳ ಪರಿಶೀಲನಾ ಮಾಹಿತಿ, ಎಂಬಿ ಪುಸ್ತಕ, ಸ್ಥಳ ಪರಿಶೀಲನಾ ಮಾಹಿತಿ ಸೇರಿದಂತೆ ಎಲ್ಲದರ ನಕಲು ಪ್ರತಿಗಳನ್ನು ಕೇಳಿದ್ದಾನೆ. ತಾ.ಪಂಚಾಯಿತಿ ವ್ಯಾಪ್ತಿಯ ಸಣ್ಣನೀರಾವರಿ, ಜಿಲ್ಲಾ ಪಂಚಾಯಿತಿ ಅನುದಾನ, ಕುಡಿಯುವ ನೀರು ಸರಬರಾಜು ವಿಭಾಗ, ಬರ ಪರಿಹಾರ ಮಾಹಿತಿ, ಸಿಎಂಎಸ್ಎಸ್ವೈ, ವಿಶೇಷ ಅಭಿವೃದ್ಧಿ ಅನುದಾನ, ಶಾಸಕರ ಅನುದಾನ, ವಿಧಾನ ಪರಿಷತ್ ಸದಸ್ಯರ ಅನುದಾನ, ಸಂಸದರ ಅನುದಾನ, ಟಿಎಸ್ಪಿ, ಎಸ್ಸಿಪಿ, ನಬಾರ್ಡ್, 13ನೇ ಹಣಕಾಸು ಸೇರಿದಂತೆ 16 ವಿವಿಧ ಅನುದಾನಗಳ ಸಮಗ್ರ ಮಾಹಿತಿ ಕೇಳಿದ್ದಾನೆ.
ಮೇಲ್ಮನವಿ: ಈತನ ಮಾಹಿತಿ ಅರ್ಜಿ ಫೆ.26ರಂದು ಅಧಿಕಾರಿಗಳಿಗೆ ತಲುಪಿದೆ. ಅಧಿಕಾರಿಗಳು ಮಾ.18 ಮತ್ತು ಮಾ.27ಕ್ಕೆ ಪತ್ರ ಬರೆದು ಲಭ್ಯವಿರುವ ಮಾಹಿತಿ ಪಡೆದುಕೊಳ್ಳುವಂತೆ ಅರ್ಜಿದಾರನಿಗೆ ಸೂಚಿಸಿದ್ದಾರೆ. ಆದರೆ ಆತ ಮೇಲ್ಮನವಿ ಸಲ್ಲಿಸಿದ್ದ. ನಂತರ ಮೇಲ್ಮನವಿ ವಿಚಾರಣೆಯೂ ಆದ ಮೇಲೆ ಜೂ.12ರ ಒಳಗೆ ಆತ ಕೇಳಿದ್ದ ಎಲ್ಲ ಮಾಹಿತಿಯನ್ನೂ ನೀಡುವಂತೆ ಜಿಲ್ಲಾ ಮಾಹಿತಿ ಅಧಿಕಾರಿಗಳು ಆದೇಶಿಸಿದ್ದರು. ಅದರನ್ವಯ ಅತನಿಗೆ ಮಾಹಿತಿಯೆಲ್ಲ ಕೊಡಲು ಸಿದ್ಧರಿದ್ದೇವೆ. ಮಾಹಿತಿಯ ನಕಲು ಪ್ರತಿಗೆ ಕನಿಷ್ಠ ಒಂದೂವರೆ ಲಕ್ಷ ವೆಚ್ಚವಾಗಬಹುದು. ಅದನ್ನು ಪಾವತಿಸಿ ಪಡೆಯಬೇಕು ಎಂಬ ಮೌಖಿಕ ಆದೇಶ ನೀಡಿದ್ದೆವು. ಆದರೆ ಆತ ಉಚಿತವಾಗಿ ನೀಡುವಂತೆ ಕೇಳಿದ. ಮಾಹಿತಿ ಹಕ್ಕು ಅಧಿನಿಯಮ ಪ್ರಕಾರ ಉಚಿತವಾಗಿ ಕೊಡಲು ಸಾಧ್ಯವಾಗದು ಎಂಬುದನ್ನೂ ಆತನ ಗಮನಕ್ಕೆ ತಂದಿದ್ದೇವೆ. ಆದರೆ ಈತ ನನಗೆ ಮಾಹಿತಿಯೇ ಬೇಡ. ಒಂದು ಕೆಲಸ ಕೊಡಿಸಿ ಎಂದು ಕೇಳಿ ನಮ್ಮ ದಾರಿ ತಪ್ಪಿಸಿದ್ದಾನೆ. ಈತ ಕೇಳಿದ ಮಾಹಿತಿ ಒದಗಿಸಲು ಬರೋಬ್ಬರಿ 3 ತಿಂಗಳು ಅಧಿಕಾರಿಗಳು ತಮ್ಮ ಕೆಲಸ ಕಾರ್ಯಬಿಟ್ಟು ಹೆಣಗಾಡಿದ್ದಾರೆ. ಈತ ನೋಡಿದರೆ ಹುಡುಗಾಟಿಕೆ ಮಾಡುತ್ತಿದ್ದಾನೆ. ಜೊತೆಗೆ ಬ್ಲಾಕ್ಮೇಲ್ ಮಾಡಿ ಅಧಿಕಾರಿಗಳನ್ನು ಕಾಡಿದ್ದಾನೆ ಎಂದು ತಾ.ಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಜೋಷಿ  ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement