ವಿವಿ ಖಾಲಿ ಹುದ್ದೆ ನೇಮಕದಲ್ಲಿ ಪಾರದರ್ಶಕತೆ ಪಾಲನೆ: ಸಚಿವ
ಬೆಂಗಳೂರು: ಇಲಾಖಾ ನೇಮಕದಲ್ಲಿ ಹಗರಣಗಳು ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಸಂದರ್ಭ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆ ಸಚಿವ ಆರ್.ವಿ. ದೇಶಪಾಂಡೆ ಸಲಹೆ ಮಾಡಿದ್ದಾರೆ.
ಡಾ. ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಐಸಿಟಿಇ ಅನುದಾನದಲ್ಲಿ ನಿರ್ಮಿಸಲಿರುವ ಅಶೋಕ ಎಸ್ಸಿ-ಎಸ್ಟಿ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕ ವಿಚಾರದಲ್ಲಿ ಅಪಸ್ವರ ಕೇಳಿಬರುತ್ತಿದೆ. ಆದ್ದರಿಂದ ವಿವಿ ನೇಮಕಾತಿ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಕೇವಲ ಮೆರಿಟ್ ಅಭ್ಯರ್ಥಿಗಳಿಗೆ ಮಾತ್ರವೇ ಹುದ್ದೆ ನೀಡಬೇಕು ಎಂದು ಸೂಚಿಸಿದರು.
ಕರ್ನಾಟಕದಲ್ಲಿ ಓದಿ ಉತ್ತೀರ್ಣರಾಗುವುದರ ಜತೆಗೆ ವಿಶ್ವ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು. ರಾಷ್ಟ್ರ ನಿರ್ಮಾಣ ವಿದ್ಯಾರ್ಥಿಗಳ ಕೈಯಲ್ಲಿದೆ ಎಂಬುವುದನ್ನು ಅರಿತುಕೊಳ್ಳಬೇಕು. ಹಣ ಇದ್ದರೆ ಸಾಕು ಎಂಬ ಭಾವನೆ ಬಿಟ್ಟು, ಶಿಸ್ತು ಮತ್ತು ಚಾರಿತ್ರ್ಯ ಇಲ್ಲದೆ ಎಷ್ಟೇ ಹಣ ಸಂಪಾದಿಸಿದರೂ ಪ್ರಯೋಜನವಿಲ್ಲ ಎಂಬುದನ್ನು ಅರಿತುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕೇಂದ್ರ ಸಚಿವ ಡಾ.ಎಂ. ವೀರಪ್ಪಮೊಯ್ಲಿ ಮಾತನಾಡಿ, ಹುಟ್ಟವಾಗಲೇ ಯಾರು ಬುದ್ಧಿವಂತರಾಗಿ ಹುಟ್ಟುವುದಿಲ್ಲ. ನೀವು ಸಂಪಾದಿಸುವ ಜ್ಞಾನ ನಿಮ್ಮನ್ನು ಬುದ್ಧಿವಂತರಾಗಿ ಮಾಡುತ್ತದೆ ಎಂದರು.
ಗುಣಮಟ್ಟ ಶಿಕ್ಷಣ ನೀಡುವುದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ ಅವರು, ಪೆಟ್ರೋಲಿಯಂ ಕಂಪನಿಗಳು ಆಂಬೇಡ್ಕರ್ ಕಾಲೇಜಿಗೆ ಬಂದು ಕ್ಯಾಂಪಸ್ ಸಂದರ್ಶನ ನಡೆಸಲು ತಿಳಿಸುತ್ತೇನೆ ಎಂದರು.
ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ.ಎಸ್.ಎಸ್. ಮಾಂತ ಮಾತನಾಡಿ, ರಾಜ್ಯದಲ್ಲಿ ಒಟ್ಟಾರೆ 55 ವಿದ್ಯಾರ್ಥಿ ನಿಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, 6 ಕರ್ನಾಟಕಕ್ಕೆ ಸೇರಿವೆ. ಈ ಪೈಕಿ ಆಂಬೇಡ್ಕರ್ ಕಾಲೇಜಿನಲ್ಲಿ 2 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗುತ್ತಿದೆ ಎಂದರು.