ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವೃಷಭಾವತಿಯಿಂದ ಕೃಷಿ ಚಟುವಟಿಕೆ ಮೇಲೆ ದುಷ್ಪರಿಣಾಮ

Rashmi Kasaragodu
Updated On : 16 Jun 2013, 12:56 pm

ಕ.ಪ್ರ.ವಾರ್ತೆ  ರಾಮನಗರ  ಜೂ.15
ಬೆಂಗಳೂರಿನ ಕೊಳಚೆ ನೀರು ಸೇರಿದಂತೆ ಕಾರ್ಖಾನೆಗಳು ಹೊರ ಬಿಡುವ ರಾಸಾಯನಿಕಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡು ಬಿಡದಿ ಸೇರಿದಂತೆ ಜಿಲ್ಲೆಯಲ್ಲಿ ಹರಿಯುವ ವೃಷಭಾವತಿ ನದಿಯ ಸುತ್ತಮುತ್ತಲಿನ 2 ಕಿ.ಮೀ. ವ್ಯಾಪ್ತಿಯಲ್ಲಿ ಮಣ್ಣು ಕಲುಷಿತಗೊಂಡು ಕೃಷಿ ಚಟುವಟಿಕೆ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಸಮಗ್ರ ವರದಿ ತಯಾರಿಸಿ ಸಲ್ಲಿಸುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಆದೇಶಿಸಿದರು.
ಕಂದಾಯ ಭವನದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕೃಷಿಗೆ ಸಂಬಂಧಿಸಿದ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿ, ವೃಷಭಾವತಿ ನದಿಯಲ್ಲಿ ಹರಿದು ಬರುತ್ತಿರುವ ಕಾರ್ಖಾನೆಗಳ ವಿಷಯುಕ್ತ ಹಾಗೂ ಕಲುಷಿತ ಕೊಳಚೆ ನೀರಿನಿಂದ ನದಿ ಪಾತ್ರದ ಗ್ರಾಮಗಳ ಮಣ್ಣು ವಿಷಯುಕ್ತವಾಗಿ, ಲವಣಾಂಶ ಹೆಚ್ಚಿರುವ ಬಗ್ಗೆ ವರದಿ ಇದೆ. ಇದರಿಂದ ಕೃಷಿ ಚಟುವಟಿಕೆಗಳ ಮೇಲೆ ಆಗುತ್ತಿರುವ ಪರಿಣಾಮ ಹಾಗೂ ಇದಕ್ಕೆ ಪರಿಹಾರ ಕ್ರಮಗಳ ಕುರಿತು ಮಾಹಿತಿಗಳು ವರದಿಯಲ್ಲಿರುವಂತೆ ಸೂಚಿಸಿದರು.
ಪರೀಕ್ಷೆ: ಬೈರಮಂಗಲ ವ್ಯಾಪ್ತಿಯ 25 ಗ್ರಾಮಗಳಲ್ಲಿ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ, ಕೃಷಿ, ತೋಟಗಾರಿಕೆ ಬೆಳೆಗಳ ಮೇಲೆ ಪರಿಣಾಮಗಳ ವರದಿ ತಯಾರಿಸಿ, ಬೆಳೆಗಳ ಇಳುವರಿ, ಗುಣಮಟ್ಟವನ್ನು ಪರೀಕ್ಷಿಸಿ, ಮಣ್ಣಿನಲ್ಲಿ ಯಾವ ರಾಸಾಯನಿಕ ಹೆಚ್ಚು ಶೇಖರಣೆಯಾಗಿದೆ ಎಂಬುದನ್ನು ವರದಿಯಲ್ಲಿ ಸೇರಿಸುವಂತೆ ಹೇಳಿದರು. ವೃಷಭಾವತಿ ಕಲುಷಿತ ನೀರಿನಿಂದ ಬೈರಮಂಗಲದ ಸುತ್ತಲಿನ ಗ್ರಾಮಗಳಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ಪರಿಹಾರಕ್ಕೆ ಪ್ರಯತ್ನಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ವೃಷಭಾವತಿ ನೀರಿನಲ್ಲಿ ಹೆಚ್ಚಾಗಿ ಕಂಡು ಬಂದಿರುವ ಕಾಪರ್, ಐರನ್, ಮ್ಯಾಂಗನೀಸ್, ಜಿಂಕ್ ಲವಣಾಂಶಗಳು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿದ್ದು, ಇವುಗಳ ಅಂಶವು ಮಣ್ಣಿನಲ್ಲಿ ಸೇರಿರುವುದರಿಂದ ಅವುಗಳನ್ನು ಹೀರಲು ಬೆಳೆಯಬೇಕಿರುವ ಬೆಳೆಗಳು, ಪರಿಹಾರ ಕ್ರಮಗಳು ಹಾಗೂ ಇವುಗಳ ಬಗ್ಗೆ ಗ್ರಾಮಸ್ಥರಲ್ಲಿ ಗ್ರಾಮ ಸಭೆಗಳನ್ನು ಕರೆದು ತಿಳಿವಳಿಕೆ ಮೂಡಿಸುವಂತೆ ಹೇಳಿದರು.
ಕೇವಲ ಬೆಳೆಗಳ ಮೇಲಷ್ಟೇ ಅಲ್ಲದೆ ಮನುಷ್ಯ, ಜಾನುವಾರುಗಳ ಮೇಲೆ ಉಂಟಾಗಿರುವ ದುಷ್ಪರಿಣಾಮಗಳನ್ನು ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಪ್ರಾಣಿಗಳ ಹಾಲು, ಮಾಂಸದಲ್ಲಿ ಇರುವ ವಿಷಯುಕ್ತ ಅಂಶಗಳ ಬಗ್ಗೆಯೂ ಪರೀಕ್ಷೆಗೆ ಒಳಪಡಿಸಬೇಕು. ಈ ಕುರಿತು ಸಂಬಂಧಿಸಿದ ಎಲ್ಲಾ ಇಲಾಖಾಧಿಕಾರಿಗಳ ಸಭೆ ಕರೆದು ವರದಿಯ ಬಗ್ಗೆ ಒಟ್ಟಾರೆ ಅಭಿಪ್ರಾಯ ಪಡೆದು ಸಮಗ್ರ ಯೋಜನೆಗೆ ಚಿಂತಿಸಿರುವುದಾಗಿ ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.  ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಣ್ಣಯ್ಯ, ತೋಟಗಾರಿಕೆ ಉಪ ನಿರ್ದೇಶಕ ಡಾ.ಬಿ.ಕೃಷ್ಣ, ಆಹಾರ ಇಲಾಖೆಯ ಹಿರಿಯ ಉಪ ನಿರ್ದೇಶಕ ಅಜೀಜುದ್ದೀನ್ ಹಫೀಜ್, ಸಹಕಾರ ಸಂಘಗಳ ಉಪ ನಿಬಂಧಕ ಕೆ.ಎಲ್.ನರಸಿಂಹಮೂರ್ತಿ, ಎಪಿಎಂಸಿ ಸಹಾಯಕ ನಿರ್ದೇಶಕ ಮಹಮದ್ ಸತ್ತಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement