ಗ್ರಾಮದೇವತೆ ಹಬ್ಬ ಊರಿನಲ್ಲಿ ಶಾಂತಿ, ನೆಮ್ಮದಿಗೆ ಸಹಾಯಕ
ನೆಲಮಂಗಲ: ಗ್ರಾಮದೇವತೆಗಳ ಹಬ್ಬ ಊರಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆ ಬೆಳೆಸಲು ಸಹಾಯಕವಾಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ವಿಜಯನಗರ ಶಾಖ ಮಠದ ಶ್ರೀ ಸ್ವಾಮ್ಯನಾಥಸ್ವಾಮೀಜಿ ಹೇಳಿದರು.
ಅವರು ಭಾನುವಾರ ತಾಲೂಕಿನ ದಾಬಸ್‌ಪೇಟೆಯ ಗುರುವನಹಳ್ಳಿ ಗ್ರಾಮದಲ್ಲಿ ನಡೆದ ಮಾರಮ್ಮ ದೇವಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಆರ್ಶೀವಚನ ನೀಡಿ ಮಾತನಾಡುತ್ತಾ ಮನೆ, ಮಠ, ದೇವಾಲಯಗಳು ಶಾಂತಿ ನೆಮ್ಮದಿ ಸುಖ ನೀಡುವ ತಾಣಗಳಾಗಿವೆ. ನಮ್ಮ ಆಯಸ್ಸು, ಆರೋಗ್ಯ, ಅಧಿಕಾರ ಎಷ್ಟು ದಿವಸ ಅಂತ ನಮಗೆ ಗೊತ್ತಿಲ್ಲ. ಪ್ರತಿದಿನ ಆರೋಗ್ಯ ಆಯಸ್ಸು ಕಡಿತಗೊಳ್ಳುತ್ತಿದೆ.
ಒಳ್ಳೆ ಕೆಲಸ ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ತ್ಯಾಗ ಸೇವೆಗಳಿಂದ ನಾವು ಜೀವನ ಅಮೂಲ್ಯವಾಗಿಸಿಕೊಳ್ಳಬೇಕು ಎಂದರು.
ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ದೇವಸ್ಥಾನಗಳು ಗ್ರಾಮದ ಜನರ ನಡುವೆ ಉತ್ತಮ ಬಾಂದವ್ಯ ಸಾಮರಸ್ಯದಿಂದ ಜೀವನ ನಡೆಸಲು ಸಹಾಯಕವಾಗಿವೆ.
ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿ ನಮ್ಮ ಸಂಸ್ಕೃತಿಯನ್ನು ಉಳಿಸಬೇಕಿದೆ ಎಂದರು. ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಂ.ಜಿ. ತಿಮ್ಮರಾಜು, ಸೋಂಪುರ ಜಿಲ್ಲಾ ಪಂಚಾಯ್ತಿ ಸದಸ್ಯ ಸುನಂದಶಿವಕುಮಾರ್, ಶಿವಗಂಗೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಹೊನ್ನಗಂಗಶೆಟ್ಟಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ, ಟಿ. ನಾಗರಾಜು, ಕೆ.ಆರ್.ರಾಮಚಂದ್ರ ನೂರಾರು ಜನ ಗ್ರಾಮಸ್ಥರು ಇದ್ದರು.