ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರೈಲು ನಿಲ್ದಾಣದ ಪ್ರವೇಶದ ಆರಂಭದಲ್ಲೇ ಅವ್ಯವಸ್ಥೆ

Rashmi Kasaragodu
Updated On : 17 Jun 2013, 12:16 pm

ವಿಶೇಷ ವರದಿ
ಬೆಂಗಳೂರು:  ಅನೈತಿಕ ಚಟುವಟಿಕೆಗಳು, ಎಲ್ಲೆಂದರಲ್ಲೇ ನಿಲ್ಲುವ ಆಟೋಗಳು, ಚಾಲಕರಿಂದ ಪ್ರಯಾಣಿಕರ ಸುಲಿಗೆ, ರಸ್ತೆಯ ಮೇಲೆ ಎಲ್ಲೆಂದರಲ್ಲೆ ನಿಲ್ಲುವ ಬಸ್‌ನಿಂದ ಇಳಿದ ಪ್ರಯಾಣಿಕರಿಂದ ಉಂಟಾಗುವ ದಟ್ಟಣೆ.
ಇದು ನಗರದ ಹೃದಯ ಭಾಗ ಗುಬ್ಬಿ ತೋಟದಪ್ಪ ರಸ್ತೆಯ ರೇಲ್ವೆ ನಿಲ್ದಾಣ ಪ್ರವೇಶದ್ವಾರದ ದುಸ್ಥಿತಿ.
ನಿತ್ಯ ಲಕ್ಷಾಂತರ ಜನ ಪ್ರಯಾಣಿಕರು ಬಂದು ಹೋಗುವ, ಸಾವಿರಾರು ವಾಹನಗಳು ಸಂಚರಿಸುವ ಗುಬ್ಬಿ ತೋಟದಪ್ಪ ರಸ್ತೆ ಹಾಗೂ ರೈಲು ನಿಲ್ದಾಣದ ಪ್ರವೇಶದ್ವಾರ ಅವ್ಯವಸ್ಥೆ ಅಗರ, ಅಕ್ರಮ ಚಟುವಟಿಕೆಗಳ ತಾಣವಾಗಿದೆ.
ಪ್ರವೇಶ ದ್ವಾರದಲ್ಲೇ ಆಟೋ ಚಾಲಕರು ಪ್ರಯಾಣಿಕರನ್ನು ಇಳಿಸುವುದರಿಂದ ಪ್ರತಿದಿನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅಂಡರ್‌ಪಾಸ್‌ನ ಪ್ರವೇಶದ್ವಾರ, ಆಟೋ ನಿಲ್ದಾಣ, ಬಸ್ ನಿಲ್ದಾಣ ಒಂದೆಡೆಯಾದರೆ, ಫುಟ್‌ಪಾತ್‌ಗಳ ಮೇಲೆ ಮಂಗಳಮುಖಿ ಹಾಗೂ ವೇಶ್ಯೆಯರ ಕಾಟ. ಇದರಿಂದಾಗಿ ಈ ರಸ್ತೆಯಲ್ಲಿ ಸಭ್ಯ ಜನ ಓಡಾಡುವುದು ದುಸ್ತರವಾಗಿದೆ. ಹೊರ ಊರುಗಳಿಂದ ಬಂದವರಿಗೆ ಆರಂಭದಲ್ಲೇ ಈ ಮಾರ್ಗ ಮುಜುಗರ ಹಾಗೂ ಕಹಿ ಅನುಭವ ನೀಡುವುದರಲ್ಲಿ ಸಂಶಯವಿಲ್ಲ ಎನ್ನುವಂತಾಗಿದೆ.
ಸಂಜೆ 7 ಗಂಟೆಯಾಗುತ್ತಿದ್ದಂತೆ ಆಟೋ ನಿಲ್ದಾಣ, ಪಾದಾಚಾರಿ ಮಾರ್ಗ, ಬಸ್ ಶೆಲ್ಟರ್‌ನಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸುವವರದ್ದೇ ಕಾರುಬಾರು. ಹೀಗಾಗಿ ಸಭ್ಯ ಜನ ಇಲ್ಲಿ ತಲೆ ಎತ್ತಿಕೊಂಡು ಓಡಾಡುವುದು ದುಸ್ತರವಾಗಿದೆ.
ಪ್ರವೇಶದ್ವಾರದ ಬಳಿ ಹಾಗೂ ಸುತ್ತಮುತ್ತ ಖಾಕಿಪಡೆ ಗಸ್ತು ತಿರುಗುತ್ತಿದ್ದರೂ ಅನೈತಿಕ ಚಟುವಟಿಕೆಗಳನ್ನು ನಡೆಸುವವರಿಗೆ ಯಾವ ಭಯವೂ ಇಲ್ಲ. ಪೊಲೀಸರು ಎಷ್ಟೇ ಎಚ್ಚರಿಕೆಗಳನ್ನು ನೀಡಿದ್ದರೂ ಕಡಿವಾಣ ಹಾಕಲು ಆಗುತ್ತಿಲ್ಲ. ಹಲವು ಬಾರಿ ಪ್ರಯಾಣಿಕರು ಇವರಿಂದ ಸುಲಿಗೆಗೆ ಒಳಗಾಗಿ ಹಣ, ಒಡವೆ ಕಳೆದುಕೊಂಡಿದ್ದಾರೆ. ಈ ಪೈಕಿ ಕೆಲವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಮತ್ತೆ ಕೆಲವರು ಮಾರ್ಯಾದೆಗೆ ಹೆದರಿ ಪೊಲೀಸರ ಬಳಿ ಹೋಗದೆ ಸುಮ್ಮನಾಗಿದ್ದಾರೆ.
ಪ್ರವೇಶದ್ವಾರದಲ್ಲಿ ದಟ್ಟಣೆ:  ಅಶಿಸ್ತು ಹಾಗೂ ಎಲ್ಲೆಂದರಲ್ಲೇ ಆಟೋಗಳನ್ನು ನಿಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ರೇಲ್ವೆ ಇಲಾಖೆ ಪ್ರಯಾಣಿಕರನ್ನು ಕರೆತರುವ ಆಟೋಗಳಿಗೆ ನಿಲ್ದಾಣದ ಆವರಣದ ಒಳಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಪ್ರಯಾಣಿಕರನ್ನು ಇಳಿಸಿದ ಬಳಿಕ ಆಟೋ ಚಾಲಕರು ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಡದ ಹಿನ್ನೆಲೆಯಲ್ಲಿ ಆಟೋಗಳಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎನ್ನುತ್ತಾರೆ ರೇಲ್ವೆ ಅಧಿಕಾರಿಗಳು. ಇದರಿಂದಾಗಿ ನಿತ್ಯ ನೂರಾರು ಆಟೋಗಳು ಪ್ರವೇಶದ್ವಾರ ಹಾಗೂ ರಸ್ತೆಯಲ್ಲಿ ನಿಲ್ಲುವುದರಿಂದ ಗುಬ್ಬಿ ತೋಟದಪ್ಪ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ರೈಲು ನಿಲ್ದಾಣದ ಆವರಣದಲ್ಲಿ ಪ್ರಿಪೇಯ್ಡ್ ಆಟೋನಿಲ್ದಾಣವಿದೆ. ಇದರ ಜತೆಗೆ ಮುಖ್ಯಪ್ರವೇಶ ದ್ವಾರದ ಬಳಿ ಮತ್ತೊಂದು ಆಟೋ ನಿಲ್ದಾಣವಿದೆ. ಆಟೋ ಚಾಲಕರು ಒಂದೇ ಸರತಿಯಲ್ಲಿ ನಿಲ್ಲದ ಕಾರಣ ಆಟೋಗಳು ಕೆಲವೊಮ್ಮೆ ಅರ್ಧ ರಸ್ತೆಯಲ್ಲಿ ನಿಂತು ಬಿಡುತ್ತವೆ. ಚಿಕ್ಕಪೇಟೆ ಸಂಚಾರ ಪೊಲೀಸರು ಇಲ್ಲಿ ಕರ್ತವ್ಯಕ್ಕಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಈ ಬಗ್ಗೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಚಿಕ್ಕಪೇಟೆ ಸಂಚಾರ ಇನ್ಸ್‌ಪೆಕ್ಟರ್ ಸುರೇಶ್, ಆಟೋ ಚಾಲಕರ ಆಶಿಸ್ತಿನ ಹಿನ್ನೆಲೆಯಲ್ಲಿ ಆವರಣದ ಒಳಗೆ ಪ್ರವೇಶಿಸಲು ರೇಲ್ವೆ ಇಲಾಖೆ ನಿರಾಕರಿಸಿದೆ. ಹೀಗಾಗಿ ಚಾಲಕರು ರಸ್ತೆಯಲ್ಲೆ ಆಟೋ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದಾರೆ. ನಾವು ಪ್ರಯಾಣಿಕರನ್ನು ಇಳಿಸಬೇಡಿ ಎಂದು ಹೇಳಲು ಆಗುವುದಿಲ್ಲ. ಆದರೆ ನಿಮಿಷಗಳಿಗೂ ಹೆಚ್ಚು ಹೊತ್ತು ನಿಲ್ಲಲು ಅವಕಾಶ ನೀಡುವುದಿಲ್ಲ' ಎನ್ನುತ್ತಾರೆ.
ಜನರನ್ನು ನಿಯಂತ್ರಿಸುವವರಿಲ್ಲ:  ಸ್ವಚ್ಚತೆ, ನಿರ್ವಹಣೆ ಇಲ್ಲದ ಫುಟ್‌ಪಾತ್ ಹಿನ್ನೆಲೆಯಲ್ಲಿ ನೂರಾರು ಪ್ರಯಾಣಿಕರು ಬ್ಯಾಗ್‌ಗಳನ್ನು ಹಿಡಿದುಕೊಂಡು ಪ್ರವೇಶದ್ವಾರ ಹಾಗೂ ರಸ್ತೆಗಳ ಅಕ್ಕಪಕ್ಕದಲ್ಲಿಯೇ ನಿಲ್ಲುತ್ತಾರೆ. ಫುಟ್‌ಪಾತ್ ಮೇಲೆ ಹೆಜ್ಜೆ ಹೆಜ್ಜೆಗೂ ಇರುವ ಫುಟ್‌ಪಾತ್ ವ್ಯಾಪಾರಿಗಳು, ತಿಂಡಿ ಮಾರುವವರಿಂದ ತುಂಬಿ ಹೋಗಿರುವ ಕಾರಣ ಜನರಿಗೆ ಓಡಾಡಲು ಜಾಗವೇ ಇಲ್ಲದಂತಾಗಿದೆ.
ಇಲ್ಲಿನ ಒಳಚರಂಡಿ ಚೇಂಬರ್‌ಗಳು ತುಂಬಿದರೆ ಮುಗಿಯಿತು. ರಸ್ತೆಯಲ್ಲೆಲ್ಲಾ ಕೊಳಚೆ ನೀರು ತುಂಬಿ ಬೆಂಗಳೂರಿಗೆ ಮೊದಲ ಬಾರಿ ಬಂದವರು ಉದ್ಯಾನ ನಗರಿ ಬೆಂಗಳೂರು ಇದೇನಾ ಎನ್ನುವುದರಲ್ಲಿ ಸಂಶಯವಿಲ್ಲ. ಪೊಲೀಸ್ ಇಲಾಖೆ, ರೇಲ್ವೆ ಇಲಾಖೆ, ಬಿಬಿಎಂಪಿ ಅಧಿಕಾರಿಗಳು, ಸಮನ್ವಯದಿಂದ ಕೆಲಸ ಮಾಡಿದರೆ ಇಲ್ಲಿನ ಸಮಸ್ಯೆ ಬಗೆಹರಿಸುವುದು ಕಷ್ಟವಿಲ್ಲ ಎನ್ನುತ್ತಾರೆ ಪ್ರಯಾಣಿಕರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement