ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸರ್ಕಾರಗಳಿಂದ ಅನ್ನದಾತನ ಕಡೆಗಡನೆ

Rashmi Kasaragodu
Updated On : 17 Jun 2013, 12:10 pm

ಕ.ಪ್ರ. ವಾರ್ತೆ   ರಾಮನಗರ   ಜೂ.16
ರೈತಪರ ಎಂದು ಹೇಳಿಕೊಂಡು ಓಟು ಗಿಟ್ಟಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಎಲ್ಲಾ ಸರ್ಕಾರಗಳು ರೈತರನ್ನು ಕಡೆಗಣಿಸಿವೆ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಆರೋಪಿಸಿದರು.
ತಾಲೂಕಿನ ಕಾಡನಕುಪ್ಪೆ ಗ್ರಾಮದಲ್ಲಿ ರಾಜ್ಯ ರೈತ ಸಂಘದ ಗ್ರಾಮ ಶಾಖೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಯಾವ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಒಂದು ಕೈಗಾರಿಕೆ ಎಂಬ ಸ್ಥಾನಮಾನ ನೀಡಿ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಿಲ್ಲ. ಇದರಿಂದ ರೈತಾಪಿ ಸಮುದಾಯದ ಸಂಕಷ್ಟ ಹೆಚ್ಚಾಗುತ್ತಲೇ ಇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಪಡೆದು 65 ವರ್ಷಗಳೇ ಗತಿಸಿದ್ದರೂ ರೈತಾಪಿ ಸಮುದಾಯಕ್ಕೆ ಮಾತ್ರ ಸ್ವಾತಂತ್ರ್ಯ ದೊರೆತಿಲ್ಲ. ರೈತರನ್ನು ರಕ್ಷಿಸಲು ಯಾವ ಸರ್ಕಾರಗಳು ಮುಂದೆ ಬಂದಿಲ್ಲ. ತಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರೆಯದ ಕಾರಣ ದೇಶದಲ್ಲಿ ಪ್ರತಿ ಅರ್ಧ ಗಂಟೆಗೊಬ್ಬ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದು ತಿಳಿಸಿದರು.
ಜಾಣಗುರುಡು: ರೈತಾಪಿ ವರ್ಗ ಪ್ರತಿ ನಿತ್ಯ ಹಲವಾರು ಸಂಕಷ್ಟಗಳ ಮಧ್ಯೆ ಜೀವನ ನಡೆಸಬೇಕಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು, ಮಧ್ಯವರ್ತಿಗಳು, ಮಾರುಕಟ್ಟೆ ಸೇರಿದಂತೆ ಎಲ್ಲ ಹಂತದಲ್ಲೂ ರೈತ ಶೋಷಣೆಗೆ ಒಳಗಾಗುತ್ತಿದ್ದಾನೆ. ದುಡಿಮೆಗೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ, ರೈತ ಮತ್ತು ಕೃಷಿ ಕೂಲಿ ಕಾರ್ಮಿಕರ ಮಕ್ಕಳ ಭವಿಷ್ಯ ಮಸುಕಾಗಿದೆ. ಇದನ್ನೆಲ್ಲಾ ಸರಿಪಡಿಸಬೇಕಾದ ಸರ್ಕಾರ ಮಾತ್ರ ಜಾಣಗುರುಡು ಪ್ರದರ್ಶಿಸುತ್ತಿದೆ ಎಂದರು.
ಸಪ್ತ ಸಾಮಾಜಿಕ ಪಾತಕ: ಮಹಾತ್ಮ ಗಾಂಧೀಜಿಯವರು ಹೇಳಿರುವಂತೆ ಸಮಾಜದಿಂದ ಸಪ್ತ ಸಾಮಾಜಿಕ ಮಹಾಪಾಪಗಳನ್ನು ಹೋಗಲಾಡಿಸದ ಹೊರತು ಸಮ ಸಮಾಜವನ್ನು ನಿರ್ಮಾಣ ಸಾಧ್ಯವಿಲ್ಲ. ದುಡಿಮೆ ಇಲ್ಲದ ಸಂಪತ್ತು, ತತ್ವರಹಿತ ರಾಜಕಾರಣ, ನೀತಿ ಇಲ್ಲದ ವ್ಯಾಪಾರ, ಶೀಲವಿಲ್ಲದ ಶಿಕ್ಷಣ, ಆತ್ಮಸಾಕ್ಷಿ ಇಲ್ಲದ ಭೋಗ, ತ್ಯಾಗವಿಲ್ಲದ ಪೂಜೆ, ಮಾನವತಾ ಶೂನ್ಯವಿಜ್ಞಾನ ಇವು ಸಪ್ತ ಸಾಮಾಜಿಕ ಪಾತಕಗಳಾಗಿವೆ. ಇವುಗಳನ್ನು ಹೋಗಲಾಡಿಸಲು ಗ್ರಾಮಸ್ಥರು ಪಣತೊಡಬೇಕು ಎಂದರು.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳನ್ನಾಧರಿಸಿ ಗೃಹ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ ವಿಶೇಷ ಕ್ರಿಯಾ ಯೋಜನೆ ರೂಪಿಸಬೇಕು. ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಗಳೊಂದಿಗೆ ಬ್ಯಾಂಕುಗಳು ಕೈ ಜೋಡಿಸಿದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಸೇಕ್ರೆಡ್ ಸಂಸ್ಥೆಯ ನಿರ್ದೇಶಕಿ ಮೇರಿ ಫಿಲೋಮಿನಾ ತಿಳಿಸಿದರು.
ವಿಶೇಷ ಕಾರ್ಯಯೋಜನೆ: ಹಾಲು ಉತ್ಪಾದನಾ ಮಹಾ ಮಂಡಳದಂತೆ ರೇಷ್ಮೆ ಬೆಳೆ ಹಾಗೂ ರೇಷ್ಮೆಯಾಧಾರಿತ ಗೃಹ ಕೈಗಾರಿಕೆ, ನೇಯ್ಗೆ ಉದ್ಯಮವನ್ನು ಸಮೃದ್ಧಿಯಾಗಿ ಬೆಳೆಸಲು ವಿಫುಲವಾದ ಅವಕಾಶಗಳಿವೆ. ರೇಷ್ಮೆ ಸಾಕಾಣಿಕೆಯನ್ನು ಮನೆ ಮಂದಿಯ ಉದ್ಯೋಗವನ್ನಾಗಿಸಲು ಜಿಲ್ಲೆಯಲ್ಲಿ ವಿಶೇಷ ಕಾರ್ಯಯೋಜನೆ ಹಮ್ಮಿಕೊಳ್ಳುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ವಿಶ್ವ ವಿದ್ಯಾಲಯದ ಸಮಾಜಕಾರ್ಯ ವಿಭಾಗದ ಸಂಯೋಜಕ ಡಾ.ಪ್ರತಿಭಾ, ಡಾ.ಗಂಗಾಧರ್, ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಚೆಲುವಯ್ಯ, ಸಂಚಾಲಕ ಬಿ.ಕೃಷ್ಣಪ್ಪ, ಸೇಕ್ರೆಡ್ ಸಂಸ್ಥೆಯ ವ್ಯವಸ್ಥಾಪಕಿ ಸ್ಟೆಲ್ಲಾ, ಗ್ರಾಮದ ಮುಖಂಡರಾದ ಭಗೀರಥ, ಪಾರ್ಥಸಾರಥಿ, ರಾಜಣ್ಣ, ಪಾಪಣ್ಣ, ಸಿದ್ದೇಗೌಡ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement